ಕನ್ನಡ ಸಾಹಿತ್ಯ, ಸಂಸ್ಕೃತಿಯಿಂದ ದೂರವಾಗುತ್ತಿರುವ ಮಕ್ಕಳು: ಕವಿ ಡಾ. ಸಿದ್ದಲಿಂಗಯ್ಯ

Update: 2018-11-19 15:51 GMT

ಬೆಂಗಳೂರು, ನ.19: ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮಕ್ಕಳು, ಕನ್ನಡ ಸಾಹಿತ್ಯ, ಸಂಸ್ಕೃತಿಯಿಂದ ದೂರ ಉಳಿದು ಬಿಡುತ್ತಾರೆ ಎಂದು ಕವಿ ಡಾ. ಸಿದ್ಧಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಸೋಮವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಮಲ್ಲೇಶ್ವರಂನ ಮಂತ್ರಿ ಮಾಲ್‌ನಲ್ಲಿ ಆಯೋಜಿಸಿದ್ದ ಪುಸ್ತಕ ದಾನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿರುವವರು ಲೌಕಿಕವಾಗಿ ಏಳಿಗೆ ಕಾಣುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಓದುವ ಲೋಕದಿಂದ ಸಿಗುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉತ್ತಮ ಪುಸ್ತಕಗಳನ್ನು ಓದುವುದರಿಂದ ಸುಂದರ ಜೀವನವನ್ನು ನಡೆಸಬಹುದು ಎಂದು ಹೇಳಿದರು.

ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆ ಜಾಗತಿಕ ಮಟ್ಟದಲ್ಲಿ ಖ್ಯಾತಿಯಿದೆ. ದಾಸಸಾಹಿತ್ಯ, ಶಿವಶರಣ ಚಳುವಳಿ ಹಾಗೂ ವಚನ ಸಾಹಿತ್ಯದ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಕನ್ನಡ ಸಾಹಿತ್ಯದಿಂದ ವಂಚಿತರಾಗುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಪ್ರತಿ ಮನೆಯಲ್ಲಿಯೂ ಪುಟ್ಟ ಗ್ರಂಥಾಲಯವನ್ನು ನಿರ್ಮಿಸಬೇಕು. ಕನಿಷ್ಠ ನೂರು ಪುಸ್ತಕಗಳನ್ನು ಇಡಬೇಕು. ಮನೆಗೆ ಬರುವ ಅತಿಥಿಗಳಿಗೆ ಪುಸ್ತಕಗಳ ಮಹತ್ವವನ್ನು ತಿಳಿಸಿಕೊಡಬೇಕು. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಮೂಡಿಸುವ ಮೂಲಕ ಮೊಬೈಲ್ ಗೀಳಿನಿಂದ ಹೊರತರಬೇಕು ಎಂದು ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಹಾಗೂ ಚಿತ್ರಕಲೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಸಕ ಸಿ.ಎನ್.ಅಶ್ವಥ್ ನಾರಾಯಣ, ಸಾಹಿತಿ ಶೂದ್ರ ಶ್ರೀನಿವಾಸ್, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಪಿ.ವಿ ಕೊಣ್ಣೂರು, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ. ಪಿ.ವೈ.ರಾಜೇಂದ್ರ, ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ ರತ್ನಾ ಕಾಳೇಗೌಡ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಎಸ್.ಹೊಸಮನಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News