ಕೆಪಿಎಸ್ಸಿ ಹೊಸ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ: ಡಿ.1ರವರೆಗೆ ಸರಕಾರಕ್ಕೆ ಗಡುವು

Update: 2018-11-19 15:56 GMT

ಬೆಂಗಳೂರು, ನ.19: ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳ ಸಂಬಂಧ ಕೆಪಿಎಸ್ಸಿ ಹೊರಡಿಸಿರುವ ಹೊಸ ಆದೇಶವನ್ನು ರಾಜ್ಯ ಸರಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು, ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳು ಹೆಚ್ಚಿನ ಮೆರಿಟ್ ಪಡೆದರೂ ಅವರನ್ನು ಸಾಮಾನ್ಯ ಕೋಟಾದಲ್ಲಿ ಪರಿಗಣಿಸದೇ ಆಯಾ ಮೀಸಲು ಗುಂಪಿನಲ್ಲೆ ಜೇಷ್ಠತೆ ಪರಿಗಣಿಸುವ ಆದೇಶ ಸರಿಯಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಿನಡಿ ಬರುವ ಎಸ್ಸಿ, ಎಸ್ಟಿ, ಹಿಂದುಳಿದವರು, ಅಲ್ಪಸಂಖ್ಯಾತರು ಸಾಮಾನ್ಯ ಕೋಟಾದ ಅಡಿ ಬರುವಂತಿಲ್ಲ ಎಂದು ಹೇಳಿರುವುದು ಆಘಾತಕಾರಿ ಎಂದು ತಿಳಿಸಿದರು.

ಹೈಕೋರ್ಟ್ 2012ರಲ್ಲಿ 1998-99, 2004-05ರಲ್ಲಿ ಕೆಎಎಸ್ ಹುದ್ದೆಗಳ ನೇಮಕಕ್ಕೆ ಮಾತ್ರ ಅನ್ವಯಿಸುವಂತೆ ನೀಡಿದ್ದ ತೀರ್ಪನ್ನು ಮುಂದಿಟ್ಟುಕೊಂಡು ಮೀಸಲಿನಡಿ ಬರುವ ಎಲ್ಲ ಶೋಷಿತರಿಗೆ ಅನ್ಯಾಯವೆಸಗಿದಂತಾಗುತ್ತದೆ. ಕಾರ್ಯದರ್ಶಿ ಸರಕಾರ ಹಾಗೂ ಆಯೋಗದ ಗಮನಕ್ಕೂ ತಾರದಂತೆ ಆದೇಶ ಜಾರಿ ಮಾಡಿರುವುದನ್ನು ಗಮನಿಸಿದರೆ ಸರಕಾರ ಜಾಣ ಕುರುಡನಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸರಕಾರ ಹೊರಡಿಸಿರುವ ಆದೇಶ ಸಂವಿಧಾನ ವಿರೋಧಿಯಾಗಿದ್ದು, ಮೀಸಲು ವರ್ಗಗಳ ಹಿತಾಸಕ್ತಿಗೆ ಧಕ್ಕೆ ಬರುವ ಆದೇಶ ಹೊರಡಿಸಿರುವ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ತ್ರಿಸದಸ್ಯ ಪೀಠ ಹೊರಡಿಸಿರುವ ತೀರ್ಪನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಬೇಕು. ಸಂವಿಧಾನವೇ ನಮ್ಮ ದೇಶಕ್ಕೆ ದೊಡ್ಡ ಗ್ರಂಥ. ಅದಕ್ಕಾಗಿ ರಾಜ್ಯ ಸರಕಾರ ಸಂವಿಧಾನವನ್ನು ಗೌರವಿಸಿ ಡಿ.1ರೊಳಗೆ ಆದೇಶವನ್ನು ಹಿಂದಕ್ಕೆ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದು ಗಡುವು ನೀಡಿದರು. ಈ ಸಂದರ್ಭದಲ್ಲಿ ಅಹಿಂದ ಹೋರಾಟಗಾರ ಪ್ರೊ.ಎನ್.ಎ.ನರಸಿಂಹಯ್ಯ, ದಲಿತ ಹೋರಾಟಗಾರದ ನಾರಾಯಣ ಸ್ವಾಮಿ, ರಮೇಶ್, ಗುರುಪ್ರಸಾದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News