ತರಬೇತಿ ವೇಳೆಯೇ ಜನಸ್ನೇಹಿಯಾಗಿ ಪೊಲೀಸರ ತಯಾರು: ಗೃಹ ಸಚಿವ ಪರಮೇಶ್ವರ್

Update: 2018-11-19 16:12 GMT

ಬೆಂಗಳೂರು, ನ.19: ತರಬೇತಿ ವೇಳೆಯಲ್ಲಿಯೇ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ, ಧೈರ್ಯದಿಂದ ಕೆಲಸ ಮಾಡುವ ಜನಸ್ನೇಹಿ ಪೊಲೀಸರನ್ನು ತಯಾರು ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ತಿಲಕ್‌ನಗರ ಪೊಲೀಸ್ ಠಾಣೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ನವೀಕರಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗಲು ರಾತ್ರಿ ಎನ್ನದೇ ಶ್ರಮಿಸುವ ಪೊಲೀಸರನ್ನು ಸಮಾಜದಲ್ಲಿ ಬಿಂಬಿಸುವ ರೀತಿ ಸರಿ ಇಲ್ಲ. ಅವರ ಮೇಲಿನ ಭಯ ಜನಸಾಮಾನ್ಯರಲ್ಲಿ ಹೋಗಬೇಕು. ಪೊಲೀಸರು ಹೆಚ್ಚು ಜನಸ್ನೇಹಿ ಸೇವೆ ನೀಡಬೇಕು. ಅದಕ್ಕಾಗಿ ತರಬೇತಿ ನೀಡುವ ಸಂದರ್ಭದಲ್ಲಿಯೇ ಸ್ನೇಹಪೂರ್ವಕ ನಡವಳಿಕೆ ಬಗ್ಗೆಯೂ ತರಬೇತಿ ನೀಡಲಾಗುವುದು ಎಂದರು.

ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ತಿಲಕ್ ನಗರ ಪೊಲೀಸ್ ಠಾಣೆ ನವೀಕರಣ ಮಾಡಿರುವ ಇನ್ಫೋಸಿಸ್‌ಗೆ ತುಂಬು ಹೃದಯದ ಧನ್ಯವಾದಗಳು. ಸೈಬರ್ ಕ್ರೈಂ ತರಬೇತಿ ಕಟ್ಟಡವನ್ನು 22 ಕೋಟಿ ರೂ.ಗಳ ವೆಚ್ಚದಲ್ಲಿ ಇನ್ಫೋಸಿಸ್ ಅವರು ನಿರ್ಮಿಸಿಕೊಡುತ್ತಿರುವುದು ಅಭಿನಂದನಾರ್ಹ. ಕರ್ನಾಟಕ ಪೊಲೀಸ್ ಅನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರಕಾರದ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ನಿಯಮ ಪಾಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿಯ ವೇತನ ತಾರತಮ್ಯ ಸರಿದೂಗಿಸಲು ಔರಾದ್‌ಕರ್ ಅವರ ವರದಿಯನ್ನು ಶೀಘ್ರವೇ ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಸಮಾರಂಭದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಶಾಸಕಿ ಸೌಮ್ಯ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News