ಅಸ್ತಿತ್ವವಿಲ್ಲದ ಕಾಲೇಜುಗಳಿಗೆ ನರ್ಸಿಂಗ್ ಸೀಟು ಹಂಚಿಕೆ

Update: 2018-11-19 16:16 GMT

ಬೆಂಗಳೂರು, ನ.19: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಹಿಳಾ ಕಾಲೇಜಿನಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಹಾಗೂ ಅಸ್ತಿತ್ವ ಇಲ್ಲದ ಕಾಲೇಜುಗಳಿಗೆ ಬಿ.ಎಸ್ಸಿ ನರ್ಸಿಂಗ್ ಕಾಲೇಜುಗಳ ಸೀಟು ಹಂಚಿಕೆ ಮಾಡಿದ್ದು, ಅವಾಂತರ ಸೃಷ್ಟಿಯಾಗಿದೆ.

ಬೆಳಗಾವಿಯ ಕೆಎಚ್‌ಐ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಶಿವಮೊಗ್ಗದ ನಂಜಪ್ಪ ಇನ್ಸ್‌ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಮಹಿಳಾ ಕಾಲೇಜುಗಳಿದ್ದು, ಇಲ್ಲಿ ಪುರುಷ ವಿದ್ಯಾರ್ಥಿಗೆ ಸೀಟು ಹಂಚಿಕೆಯಾಗಿದೆ. ಇಲ್ಲಿ ಪ್ರವೇಶ ಪಡೆಯುವ ಸಲುವಾಗಿ ತೆರಳಿದ್ದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಪ್ರವೇಶ ನೀಡದೇ ನಿರಾಕರಿಸಲಾಗಿದೆ. ಅಲ್ಲದೆ, ಹಲವು ನರ್ಸಿಂಗ್ ಕಾಲೇಜುಗಳಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದು, ಕೆಇಎಗೆ ದೂರು ನೀಡಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ನಿಯಮ ಪ್ರಕಾರ ಮಹಿಳಾ ಕಾಲೇಜಿನಲ್ಲಿ 50 ಸೀಟುಗಳ ಪೈಕಿ ಎರಡು ಪುರುಷರಿಗೆ ಮೀಸಲಿಡಬೇಕು ಎಂದಿದೆ. ಅದರ ಆಧಾರದಲ್ಲಿ ಸೀಟ್ ಮ್ಯಾಟ್ರಿಕ್ಸ್ ರೂಪಿಸಿ ಕೆಇಎಗೆ ನೀಡಿರುವುದರಿಂದ ಕೊಟ್ಟ ಸೀಟುಗಳನ್ನು ಕೆಇಎ ಹಂಚಿಕೆ ಮಾಡಿದೆ.

ಸೀಟು ಹಂಚಿಕೆಯಾಗಿರುವ ಕಾಲೇಜುಗಳ ಪೈಕಿ 50 ಕ್ಕೂ ಅಧಿಕ ಕಾಲೇಜುಗಳು ಅಸ್ತಿತ್ವದಲ್ಲಿಯೇ ಇಲ್ಲ. ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಮಾಹಿತಿ ಪ್ರಕಾರ 672 ನರ್ಸಿಂಗ್ ಕಾಲೇಜುಗಳು ನೋಂದಾಯಿಸಿಕೊಂಡಿವೆ. ಪ್ರತಿ ವರ್ಷ ರಾಜೀವ್ ಗಾಂಧಿ ಆರೊಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಬಿಎಸ್ಸಿ ನರ್ಸಿಂಗ್ ಕೊರ್ಸ್‌ಗಳಿಗೆ ಸೀಟು ಹಂಚಿಕೆ ಮಾಡುತ್ತಿತ್ತು. ಮೊದಲ ಬಾರಿಗೆ ಬಹುತೇಕ ಎಲ್ಲ ಪದವಿ ಕೊರ್ಸ್‌ಗಳ ಸೀಟು ಹಂಚಿಕೆಯನ್ನು ಸರಕಾರ ಕೆಇಎಗೆ ನೀಡಲಾಗಿದೆ.

ಕಳೆದ ಜೂನ್‌ನಲ್ಲಿ ಬಿ.ಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ಕೆಇಎ ಅಧಿಸೂಚನೆ ಹೊರಡಿಸಿತ್ತು. ಪ್ರವೇಶಕ್ಕೆ 6631 ಅರ್ಜಿಗಳು ಬಂದಿದ್ದವು. 3,338 ಸೀಟುಗಳು ಲಭ್ಯವಿದ್ದವು. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಶನಿವಾರ (ನ.17) ಕೊನೇ ದಿನವಾಗಿತ್ತು. ಪ್ರವೇಶ ನಂತರ ಉಳಿಕೆ ಸೀಟುಗಳ ಆಧಾರದ ಮೇಲೆ ಎರಡನೇ ಸುತ್ತಿನ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಹೆಚ್ಚುವರಿ ಶುಲ್ಕ: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲದೆ ನರ್ಸಿಂಗ್ ಕಾಲೇಜುಗಳೂ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿವೆ. ರಾಜ್ಯ ಸರಕಾರ 6,500 ರೂ. ಶುಲ್ಕ ನಿಗದಿ ಮಾಡಿದ್ದರೆ 30-40 ಲಕ್ಷದವರೆಗೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬೇಸತ್ತಿರುವ ವಿದ್ಯಾರ್ಥಿಗಳು ಕೆಇಎಗೆ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News