ವಿಚಾರಣಾಧೀನ ಆರೋಪಿಗಳಿಗೆ ಕೇಸಿನ ಮಾಹಿತಿಯನ್ನು ನೀಡಬೇಕು: ಹೈಕೋರ್ಟ್ ಅಭಿಪ್ರಾಯ

Update: 2018-11-19 16:21 GMT

ಬೆಂಗಳೂರು, ನ.19: ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕ್ರಿಮಿನಲ್ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಕೇಸಿನ ಮಾಹಿತಿ ತಿಳಿಸುವಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜೈಲು ಸೂಪರಿಂಟೆಂಡೆಂಟ್‌ಗಳು ವಿಡಿಯೊ ಕಾನ್ಫರೆನ್ಸ್ ಸೌಲಭ್ಯದ ಪರಿಣಾಮಕಾರಿ ಸದುಪಯೋಗಕ್ಕೆ ಮುಂದಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪ್ರೇಮಕುಮಾರ್ ಶಿಕ್ಷೆ ರದ್ದುಗೊಳಿಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ಕುಮಾರ್ ಹಾಗೂ ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಕುರಿತಂತೆ ಕಾನೂನು ಸೇವಾ ಪ್ರಾಧಿಕಾರ ಮತ್ತು ಜೈಲು ಸೂಪರಿಂಟೆಂಡೆಂಟ್‌ಗಳಿಗೆ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ಹಾಜರಾಗಿದ್ದ ವಕೀಲ ವೆಂಕಟೇಶ್ ಪಿ.ದಳವಾಯಿ, 2018ರಲ್ಲಿ ಇಮ್ತಿಯಾಜ್ ರಮ್ಜಾನ್ ಖಾನ್ ವರ್ಸಸ್ ಮಹಾರಾಷ್ಟ್ರ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಲಾಗಿರುವ ನಿರ್ದೇಶನಗಳನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಪಾಲಿಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಆರೋಪಿಗಳು ಖಾಸಗಿಯಾಗಿ ವಕೀಲರನ್ನು ನೇಮಿಸಿಕೊಂಡಾಗ ಸಿಗುವಂತಹ ಗುಣಮಟ್ಟದ ನ್ಯಾಯದಾನ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದೆ ಜೈಲಿನಲ್ಲಿರುವ ಆರೋಪಿಗಳಿಗೂ ದೊರೆಯುವಂತಾಗಬೇಕು. ಈ ಮೂಲಕ ಸಂವಿಧಾನದ 39 ಎ ವಿಧಿಯ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ಈ ಕುರಿತಂತೆ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ಪರಿಗಣಸಿದೆ.

ನಿರ್ದೇಶನ: ಈಗ ನಡೆಸಲಾಗುತ್ತಿರುವ ಪತ್ರ ವ್ಯವಹಾರ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಪ್ರಕರಣ ಯಾವಾಗ ವಿಚಾರಣೆಗೆ ಬಂದಿದೆ ಮತ್ತು ಬರಲಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ಮುಂಚಿತವಾಗಿ ಕೈದಿಗಳಿಗೆ ತಿಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಕೇಸಿಗೆ ಸಂಬಂಧಿಸಿದ ಮಾಹಿತಿ ಕೇವಲ ವಕೀಲರಿಗೆ ಗೊತ್ತಿದ್ದ ಮಾತ್ರಕ್ಕೆ ಸಾಕಾಗುವುದಿಲ್ಲ. ಅದು ವಿಚಾರಣಾ ಕೈದಿಗೂ ಸಂಪೂರ್ಣ ಗೊತ್ತಿರಬೇಕು. ಈಗಾಗಲೇ ಹೈಕೋರ್ಟ್‌ನಲ್ಲಿರುವ ವಿಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಇದಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News