ಲೈಂಗಿಕ ಶೋಷಣೆ ಪ್ರಕರಣ: ಕೋರ್ಟಿಗೆ ಶರಣಾದ ಬಿಹಾರದ ಮಾಜಿ ಸಚಿವೆ ಮಂಜೂ ವರ್ಮಾ

Update: 2018-11-20 07:59 GMT

ಪಾಟ್ನಾ, ನ.20: ಮುಝಫ್ಫರ್‌ಪುರ ಆಶ್ರಯಧಾಮದ ಲೈಂಗಿಕ ಶೋಷಣೆ ಪ್ರಕರಣದ ಭಾಗಿಯಾದ ಆರೋಪಕ್ಕೆ ಒಳಗಾಗಿ ತಲೆ ಮರೆಸಿಕೊಂಡಿದ್ದ ನಿತೀಶ್ ಕುಮಾರ್ ಸಂಪುಟದ ಮಾಜಿ ಸಚಿವೆ ಮಂಜೂ ವರ್ಮಾ ಕೊನೆಗೂ ಬೆಗುಸರೈಯಲ್ಲಿರುವ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ವರ್ಮಾ ಶರಣಾಗತಿಯ ಮೂಲಕ ಬಿಹಾರ ಸರಕಾರ ನಿಟ್ಟುಸಿರುಬಿಟ್ಟಿದೆ. ವರ್ಮಾರನ್ನು ಪತ್ತೆ ಹಚ್ಚಲು ವಿಫಲವಾಗಿದ್ದ ಬಿಹಾರ ಸರಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ವರ್ಮಾ ಕಳೆದ ವಾರ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ತೆರಳಿದ್ದರು. ಆಶ್ರಯಧಾಮ ಲೈಂಗಿಕ ಶೋಷಣೆ ಪ್ರಕರಣವನ್ನು ಬಿಹಾರ ಸರಕಾರ ನಿಭಾಯಿಸಿದ ರೀತಿಗೆ ಉಚ್ಛ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ವರ್ಮಾರನ್ನು ಪತ್ತೆ ಹಚ್ಚಲು ವಿಫಲವಾಗಿರುವ ಬಿಹಾರದ ಪೊಲೀಸ್ ಮುಖ್ಯಸ್ಥರನ್ನು ನ.27ಕ್ಕೆ ತನ್ನ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಮಂಜೂ ವರ್ಮಾ ಅವರ ಪತಿ ಚಂದ್ರಶೇಖರ್ ವರ್ಮಾ ಮುಝಫ್ಫರ್‌ಪುರ ಆಶ್ರಯಧಾಮಕ್ಕೆ ಹಲವು ಬಾರಿ ಭೇಟಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಮಂಜೂ ಸಾಮಾಜಿಕ ಕಲ್ಯಾಣ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಶೇಖರ್ ವರ್ಮಾ ಆಪ್ತ, ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಶರಣಾಗಿದ್ದ.

ಬಿಹಾರದ ಮುಝಫ್ಫರ್‌ಪುರ ಆಶ್ರಯಧಾಮದಲ್ಲಿರುವ 40ಕ್ಕೂ ಅಧಿಕ ಬಾಲಕಿಯರನ್ನು ಲೈಂಗಿಕವಾಗಿ ಶೋಷಣೆ ಮಾಡಿರುವ ಆಘಾತಕಾರಿ ವಿಚಾರ ಎಪ್ರಿಲ್‌ನಲ್ಲಿ ಬೆಳಕಿಗೆ ಬಂದಿತ್ತು. ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯು ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದ್ದ ವರದಿಯಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News