ಸಾವಲ್ಲೂ ಸಾರ್ಥಕತೆ: ಕೈ ಸಹಿತ ಹಲವು ಅಂಗಾಂಗ ದಾನ ಮಾಡಿದ ಮೆದುಳು ನಿಷ್ಕ್ರಿಯಗೊಂಡ ಯುವಕ

Update: 2018-11-20 10:15 GMT

ಬೆಂಗಳೂರು, ನ.20: ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ 22 ವರ್ಷದ ಯುವಕನ ಕೈಗಳನ್ನು ಪುದುಚೇರಿ ಫ್ಯಾಕ್ಟರಿಯಲ್ಲಿ ಕ್ರಶರ್ ದುರಂತದಲ್ಲಿ ಕೈಗಳನ್ನು ಕಳೆದುಕೊಂಡ 31 ವರ್ಷದ ವ್ಯಕ್ತಿಗೆ ಜೋಡಿಸಲಾಗುವುದು. ರಾಸಾಯನಿಕ ಮಿಶ್ರಣ ಹಾಗೂ ಮಂಜುಗಡ್ಡೆಯಿಂದ ಸಂರಕ್ಷಿಸಲ್ಪಟ್ಟ ಕೈಗಳು ಬೆಂಗಳೂರಿನಿಂದ 300 ಕಿ.ಮೀ. ದೂರದಲ್ಲಿರುವ ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುವೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಇಲ್ಲಿಗೆ ಮೂರು ಗಂಟೆ ಅವಧಿಯೊಳಗಾಗಿ ಸೋಮವಾರ ಸಂಜೆ 4:15ಕ್ಕೆ ತಲುಪಿತು.

ಅಂಗದಾನ ಮಾಡಿದ ಯುವಕ ಮೂಲತಃ ಬಿಹಾರದವನಾಗಿದ್ದು ಆತ ಟೆಲಿಕಾಂ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದ. ನವೆಂಬರ್ 15ರಂದು ಆನೆಕಲ್‌ನತ್ತ ಸಹೋದ್ಯೋಗಿಯ ಬೈಕಿನ ಹಿಂಬದಿಯಲ್ಲಿ ಕುಳಿತು ರಿಟೇಲರ್ ಒಬ್ಬರಿಂದ ಹಣ ಸಂಗ್ರಹಕ್ಕಾಗಿ ಸಾಗುತ್ತಿದ್ದಾಗ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟು ತಗಲಿದ್ದ ಆತನನ್ನು ಮೊದಲು ಆನೇಕಲ್ ಸರಕಾರಿ ಆಸ್ಪತ್ರೆಗೆ ಹಾಗೂ ಬಳಿಕ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನವೆಂಬರ್ 16ರಂದು ನಾರಾಯಣ ಹೆಲ್ತ್ ಸಿಟಿಗೆ ಸಾಗಿಸಲಾಗಿತ್ತು. ಎರಡು ದಿನಗಳ ನಂತರ ಆತನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು. ಆತನ ಹೆತ್ತವರು ಆತನ ಕೈಗಳು ಸೇರಿದಂತೆ ಆತನ ಇತರ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

ಆತನ ಬಡ ಹೆತ್ತವರು ಈಗಾಗಲೇ ತಮ್ಮ ಮೂವರು ಮಕ್ಕಳನ್ನು ಕಳೆದುಕೊಂಡಿದ್ದು, ಈಗ ತಮ್ಮ ನಾಲ್ಕನೇ ಕರುಳ ಕುಡಿಯನ್ನು ಕಳೆದುಕೊಂಡಿದ್ದಾರೆ.

ಯುವಕನ ಹೃದಯವನ್ನು ಮಧ್ಯ ಪ್ರದೇಶದ 18 ವರ್ಷದ ಯುವತಿಗೆ ಜೋಡಿಸಲಾಗುತ್ತದೆ. ಲಿವರ್ ಅನ್ನು ಲಿವರ್ ಕ್ಯಾನ್ಸರಿನಿಂದ ಬಳಲುತ್ತಿರುವ ಬೆಂಗಳೂರಿನ 67 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗುವುದು. ಯುವಕನ ಒಂದು ಕಿಡ್ನಿಯನ್ನು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿನ ರೋಗಿಗೆ ಕಸಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News