ಕೆಪಿಎಸ್‌ಸಿ ಮೀಸಲಾತಿ: ತಪ್ಪು ತಿದ್ದಿಕೊಂಡರೆ ಸಾಕೇ?

Update: 2018-11-21 05:36 GMT

ಕೊನೆಗೂ ಸರಕಾರ ತನ್ನ ತಪ್ಪನ್ನು ತಿದ್ದಕೊಂಡಿದೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಪ್ರವೇಶ ಪಡೆಯಲು ಇರುವ ಅವಕಾಶವನ್ನು ಮುಂದುವರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂತಹದೊಂದು ತಪ್ಪು ಆಕಸ್ಮಿಕವಾಗಿ ನಡೆದಿರುವುದಲ್ಲ. ಈ ಆದೇಶ ಯಾವುದೇ ಸದ್ದು ಗದ್ದಲವಿಲ್ಲದೆ ಅನುಷ್ಠಾನಗೊಂಡಿದ್ದರೆ ದಲಿತ ಅಭ್ಯರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿತ್ತು. ತಮ್ಮ ಜಾತಿಯ ಕಾರಣಗಳಿಂದಾಗಿಯೇ ಅವಕಾಶದಿಂದ ವಂಚಿತರಾಗಿ ಮೇಲ್ಜಾತಿಯ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧಿಸಲು ಶಕ್ತಿಯಿಲ್ಲದವರಿಗಾಗಿ ಮೀಸಲಾತಿಯನ್ನು ನೀಡಲಾಗಿದೆ. ಆದರೆ ಮೀಸಲಾತಿಯ ಉದ್ದೇಶವನ್ನೇ ತಲೆಕೆಳಗು ಮಾಡುವಂತೆ, ಕೆಳ ಜಾತಿಯ ವಿದ್ಯಾರ್ಥಿಗಳ ಅವಕಾಶಗಳನ್ನು ಮೇಲ್ಜಾತಿಗಳಿಗೆ ನೀಡುವ ಹುನ್ನಾರದ ಭಾಗವಾಗಿ ಇಂತಹದೊಂದು ನಿರ್ಧಾರವನ್ನು ಆಯೋಗ ಸದ್ದಿಲ್ಲದೆ ಜಾರಿಗೊಳಿಸಲು ಹೊರಟಿತು. ಇದರಲ್ಲಿ ಯಶಸ್ವಿಯಾಗಿದ್ದರೆ ಮೀಸಲಾತಿ ಒಂದು ಅಣಕವಾಗಿ ಬಿಡುತ್ತಿತ್ತು.

ಮೀಸಲಾತಿ ವಿಭಾಗದಲ್ಲೇ ಪ್ರತಿಭಾವಂತ ದಲಿತರು ಆಯ್ಕೆಯಾಗುತ್ತಾರೆ ಎಂದಾದರೆ ಮೀಸಲಾತಿಯ ಅಗತ್ಯವಾದರೂ ಏನಿದೆ? ಆ ಪ್ರತಿಭಾವಂತರು ಮೀಸಲಾತಿಯಿಲ್ಲದೇ ಇದ್ದರೂ ಆಯ್ಕೆಯಾಗುವುದಿಲ್ಲವೇ? ಇದು ಉನ್ನತ ಅಧಿಕಾರಿಗಳಿಗೆ ಗೊತ್ತಿಲ್ಲದ ಸಂಗತಿಯೆ? ಇದು ನಡೆದಿರುವುದು ಜಾತ್ಯತೀತ ಮೈತ್ರಿ ಸರಕಾರದ ಆಡಳಿತಾವಧಿಯಲ್ಲಿ ಎನ್ನುವುದು ಆಘಾತಕಾರಿ ಅಂಶ. ಸಿದ್ದರಾಮಯ್ಯ, ಕುಮಾರಸ್ವಾಮಿ, ಪರಮೇಶ್ವರ್‌ರಂತಹ ಮುಂದಾಳುಗಳಿರುವ ಸರಕಾರದಲ್ಲಿ ಈ ಅನಾಹುತ ನಡೆಯಲು ಹೇಗೆ ಸಾಧ್ಯವಾಯಿತು? ತಪ್ಪು ತಿದ್ದಿಕೊಂಡ ಬಳಿಕವೂ ಈ ಬಗ್ಗೆ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದುದು ಅತ್ಯಗತ್ಯ. ಇದೊಂದು ಆಕಸ್ಮಿಕ ಖಂಡಿತ ಅಲ್ಲ. ಈ ಸುತ್ತೋಲೆಯ ಹಿಂದೆ ಕೆಲವು ಶಕ್ತಿಗಳಿವೆ. ಆ ಶಕ್ತಿಗಳು ಮೀಸಲಾತಿಯನ್ನು ವಿಫಲಗೊಳಿಸುವ ಉದ್ದೇಶವನ್ನು ಹೊಂದಿವೆೆ. ಮತ್ತು ಮೇಲ್ಜಾತಿಯ ಹಿತಾಸಕ್ತಿಯನ್ನು ರಕ್ಷಿಸಲು ಯೋಜನೆ ರೂಪಿಸಿವೆ. ಆದುದರಿಂದಲೇ ಸಿಎಂ ಗಮನಕ್ಕೆ ತಾರದೆಯೇ ಸುತ್ತೋಲೆ ಹೊರಡಿಸಲಾಗಿದೆ.

ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಮುಖ್ಯಕಾರ್ಯದರ್ಶಿ ಆದೇಶ ನೀಡಿದ್ದಾರೆ. ಇಲ್ಲಿ ತಪ್ಪು ಸಂಭವಿಸಿರುವುದು ನಿಜವೇ ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆ ಯಾಕಾಗಿಲ್ಲ? ಮುಂದೆ ಇಂತಹ ತಪ್ಪುಗಳು ನಡೆಯದಂತೆ ಆ ಉನ್ನತ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಆದರೆ ಸರಕಾರ ಇನ್ನೂ ಆ ಬಗ್ಗೆ ಚಿಂತೆ ಮಾಡಿದಂತಿಲ್ಲ. ವಿಪರ್ಯಾಸವೆಂದರೆ, ಆದೇಶವನ್ನು ಹಿಂದಕ್ಕೆ ಪಡೆಯಬೇಕಾದರೆ ದಲಿತರು ಬೀದಿಗಿಳಿಯಬೇಕಾಯಿತು. ಹೋರಾಟ ನಡೆಸಬೇಕಾಯಿತು. ಮೈತ್ರಿ ಸರಕಾರದ ಭಾಗವಾಗಿರುವ ಕಾಂಗ್ರೆಸ್ ನಾಯಕರೇ ದೊಡ್ಡ ಧ್ವನಿಯಲ್ಲಿ ಮಾತನಾಡಬೇಕಾಯಿತು. ಇಷ್ಟೆಲ್ಲ ಆದ ಬಳಿಕ ಅಂತಿಮವಾಗಿ ಸರಕಾರ ತಪ್ಪನ್ನು ತಿದ್ದಿಕೊಂಡಿದೆ. ಆದರೆ ತಪ್ಪು ಮಾಡಿದ ಅಧಿಕಾರಿಯನ್ನು ತನ್ನ ‘ಮಗು’ವೋ ಎಂಬಂತೆ ರಕ್ಷಿಸಲು ಹೊರಟಿದೆ.

ಸಿದ್ದರಾಮಯ್ಯ ಸರಕಾರದ ಕಾಲದಲ್ಲೂ ಇಂತಹ ತಪ್ಪೊಂದು ಜರುಗಿತ್ತು. ‘ಗೋರಕ್ಷಕರ ಪಡೆಯ ನಿಷೇಧ’ದ ಬಗ್ಗೆ ಸುಪ್ರೀಂಕೋರ್ಟ್ ವಿವಿಧ ರಾಜ್ಯಗಳ ಅಭಿಪ್ರಾಯ ಕೇಳಿದಾಗ, ಕರ್ನಾಟಕ ರಾಜ್ಯ ನಿಷೇಧವನ್ನು ಬೆಂಬಲಿಸಲಿಲ್ಲ. ಗೋರಕ್ಷಕರ ನಿಷೇಧ ಬೇಡ ಎಂಬ ಅರ್ಥದಲ್ಲಿ ಕರ್ನಾಟಕ ರಾಜ್ಯ ಸುಪ್ರೀಂಕೋರ್ಟ್‌ಗೆ ಉತ್ತರವನ್ನು ಬರೆದಿತ್ತು. ನೋಡಿದರೆ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಅರಿವಿರಲಿಲ್ಲ ಅಥವಾ ಅವರಿಗೆ ತಪ್ಪು ಮಾಹಿತಿಯನ್ನು ನೀಡಿ ಸುಪ್ರೀಂಕೋರ್ಟ್‌ಗೆ ಉತ್ತರವನ್ನು ನೀಡಲಾಗಿತ್ತು. ಅದರ ಹಿಂದೆ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿತ್ತು. ಇಂದು ರಾಜ್ಯದಲ್ಲಿ ಗೃಹಸಚಿವರು ಜಾತ್ಯತೀತರೇ ಆಗಿರಬಹುದು. ಆದರೆ ಪೊಲೀಸ್ ಇಲಾಖೆಗಳಲ್ಲಿರುವ ಅಧಿಕಾರಿಗಳಲ್ಲಿ ಸಂಘಪರಿವಾರದ ಏಜೆಂಟ್‌ಗಳಿದ್ದರೆ, ಅವರು ನೀಡಿದ ತಪ್ಪು ಮಾಹಿತಿಗಳನ್ನೇ ನಂಬಬೇಕಾಗುತ್ತದೆ. ಈ ಹಿಂದೆ ಕೊಡಗಿನಲ್ಲಿ ಟಿಪ್ಪು ಜಯಂತಿ ನಡೆದಾಗ ಪೊಲೀಸ್ ಇಲಾಖೆ ನೀಡಿದ ಮಾಹಿತಿಯನ್ನೇ, ಮಾಧ್ಯಮಗಳಿಗೆ ಅರುಹಿ ಅಂದಿನ ಗೃಹ ಸಚಿವ ಪರಮೇಶ್ವರ್ ತೀವ್ರ ಮುಜುಗರವನ್ನು ಅನುಭವಿಸಿದ್ದರು. ಇದೆಲ್ಲದರಿಂದ ಒಂದು ಸ್ಪಷ್ಟವಾಗುತ್ತದೆ. ಈ ದೇಶವನ್ನು ಶಾಸಕಾಂಗ ಆಳುತ್ತಿರುವಂತೆ ಭಾಸವಾಗುತ್ತಿದೆ. ಆದರೆ ನಿಜಕ್ಕೂ ಆಳುತ್ತಿರುವುದು ಕಾರ್ಯಾಂಗ. ಶಾಸಕಾಂಗ ವ್ಯವಸ್ಥೆಯ ಅನುಭವದ ಕೊರತೆ, ಅಜ್ಞಾನ, ಮುಗ್ಧತೆಯನ್ನು ದುರುಪಯೋಗಗೊಳಿಸುತ್ತಾ ತಮ್ಮ ಅಜೆಂಡಾಗಳನ್ನು ಈ ಅಧಿಕಾರಿ ವರ್ಗ ಜಾರಿಗೊಳಿಸುತ್ತಿದೆ. ಇಂದು ಒಬ್ಬ ಮುಖ್ಯಮಂತ್ರಿ ಐದು ವರ್ಷ ಆಳ್ವಿಕೆ ನಡೆಸುವುದೇ ಒಂದು ಸಾಧನೆ.

ಯಾವುದೇ ಸರಕಾರ ಐದು ವರ್ಷ ಪೂರೈಸುತ್ತದೆ ಎನ್ನುವ ಭರವಸೆ ಯಾರಿಗೂ ಇಲ್ಲ. ಇಂತಹ ಹೊತ್ತಿನಲ್ಲಿ, ಅಧಿಕಾರಕ್ಕೇರಿದ ಜನಪ್ರತಿನಿಧಿಗಳಿಗೆ ಇಲಾಖೆಯ ಅನುಭವವನ್ನು ತನ್ನದಾಗಿಸಿಕೊಳ್ಳುವುದಕ್ಕೇ ವರ್ಷಗಳು ಬೇಕಾಗುತ್ತವೆ. ಅಧಿಕಾರಿಗಳು ಸಹಕರಿಸಿದರೆ ಮಾತ್ರ ಇದು ಸಾಧ್ಯ. ಜನಪ್ರತಿನಿಧಿ ಕೆಲವೊಮ್ಮೆ ಉತ್ತಮ ಚಿಂತನೆಗಳನ್ನು ಹೊಂದಿದ್ದರೂ, ಅಧಿಕಾರಿ ಅದನ್ನು ವಿಫಲಗೊಳಿಸಬಹುದು. ಸಿದ್ದರಾಮಯ್ಯ ಆಡಳಿತಾವಧಿಯ ಆರಂಭದಲ್ಲಿ ಅಧಿಕಾರಿಗಳು ಅಸಹಕಾರ ನೀಡಿದ್ದನ್ನು, ಮುಖ್ಯಮಂತ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮಂದ ನೀತಿ ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಧಿಕಾರಿಗಳೆಲ್ಲ ತಮ್ಮದೇ ಆದ ಸಿದ್ಧಾಂತ, ನಿಲುವುಗಳನ್ನು ಹೊಂದಿದವರಾಗಿದ್ದಾರೆ.

ಇಂತಹ ಸರಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶವನ್ನೂ ಅವರು ಹೊಂದಿರುತ್ತಾರೆ. ತಮ್ಮ ಒಲವಿಗೆ ವಿರುದ್ಧವಿರುವ ಸರಕಾರ ಬಂದಾಗ ಒಳಗಿಂದೊಳಗೆ ಆ ಸರಕಾರದ ಯೋಜನೆಗಳನ್ನು ವಿಫಲಗೊಳಿಸುತ್ತಾ ಹೋಗುತ್ತಾರೆ. ಹೆಚ್ಚಿನ ಸಚಿವರಿಗೆ ತಮ್ಮ ಖಾತೆಯ ಕಾರ್ಯವೈಖರಿಯ ಅರಿವೇ ಇರುವುದಿಲ್ಲ. ಅವರನ್ನು ದಾರಿ ತಪ್ಪಿಸುವುದು ಈ ಉನ್ನತ ಅಧಿಕಾರಿಗಳಿಗೆ ಸುಲಭ. ಆದುದರಿಂದಲೇ ಇರಬೇಕು, ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ, ಆಡಳಿತ ನಡೆಸುವವರು ಅಧಿಕಾರಿಗಳೇ ಆಗಿರುತ್ತಾರೆ. ಕೆಲವೊಮ್ಮೆ ಇವರನ್ನು ಎದುರು ಹಾಕಿಕೊಳ್ಳಲು ಸಚಿವರೇ ಹೆದರುವ ಸನ್ನಿವೇಶವಿದೆ. ಈ ಕಾರಣದಿಂದಲೇ, ಜಾತ್ಯತೀತ ಸರಕಾರವೊಂದು ಅಧಿಕಾರಕ್ಕೆ ಬಂದಾಕ್ಷಣ ಮೊದಲು ತಮಗೆ ಸಲಹೆ ನೀಡುವ, ಮಾಹಿತಿ ನೀಡುವ ಅಧಿಕಾರಿಗಳ ಹಿನ್ನೆಲೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ವೈಯಕ್ತಿಕವಾಗಿ ಆತನೂ ಜಾತ್ಯತೀತ, ಜನಪರ ಚಿಂತನೆಗಳ ಮೇಲೆ ನಂಬಿಕೆ ಹೊಂದಿರುವವನಾಗಿರಬೇಕು. ಆಗ ಮಾತ್ರ ಸರಕಾರವೂ ಜಾತ್ಯತೀತವಾಗಿ ಗುರುತಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಕೋತಿ ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸಿದಂತಾಗುತ್ತದೆ. ಕೆಪಿಎಸ್‌ಸಿ ಮೀಸಲಾತಿ ವಿಷಯದಲ್ಲೂ ಇದೇ ನಡೆದಿದೆ. ಆದುದರಿಂದ ಆ ಕೋತಿಯನ್ನು ಗುರುತಿಸಿ, ಸರಕಾರ ತಕ್ಷಣ ಕಾಡಿಗೆ ಕಳುಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News