ಬೆಂಗಳೂರು: ನ್ಯಾಯಮೂರ್ತಿ ಎ.ಎಂ.ಫಾರೂಕ್ ನಿಧನ

Update: 2018-11-21 12:51 GMT

ಬೆಂಗಳೂರು, ನ.21: ಕರ್ನಾಟಕ ರಾಜ್ಯ ಹೈಕೋರ್ಟ್‌ನಲ್ಲಿ ಸತತ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎಂ ಫಾರೂಕ್(75) ಬುಧವಾರ ನಿಧನ ಹೊಂದಿದ್ದಾರೆ.

ಫಾರುಕ್ ಅವರು ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದು, ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

ಬುಧವಾರ ಸಂಜೆ ಅಂತ್ಯಕ್ರಿಯೆ ಜಯಮಹಲ್‌ನಲ್ಲಿರುವ ಅಬ್ದುಲ್ ಖುದ್ದೂಸ್ ಕಬರ್ ಸ್ಥಾನದಲ್ಲಿ ನಡೆದಿದ್ದು, ಪಾರ್ಥಿವ ಶರೀರವನ್ನು ಹೆಬ್ಬಾಳ ಮೇಲ್ಸೆತುವೆ ಬಳಿ ಇರುವ ನ್ಯಾಯ ಗ್ರಾಮದ ಕ್ವಾಟ್ರಸ್‌ನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1943ರ ಆಗಸ್ಟ್ 17ರಂದು ಜನಿಸಿದ ಎ.ಎಂ.ಫಾರೂಕ್ ಅವರು ಬೆಂಗಳೂರು ಮತ್ತು ಕಾಸರಗೋಡಿನಲ್ಲಿ ವ್ಯಾಸಂಗ ಮಾಡಿ, ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. 1968ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಅವರು ಕೆ.ಜಗನ್ನಾಥ ಶೆಟ್ಟಿ (ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ) ಮತ್ತು ಎನ್.ಸಂತೋಷ್ ಹೆಗ್ಡೆ (ನಿವೃತ್ತ ಲೋಕಾಯುಕ್ತ) ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

ಕಾನೂನು ಕ್ಷೇತ್ರದಲ್ಲಿ 40ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿದ್ದ ಫಾರೂಕ್ ಅವರು, 1975ರಲ್ಲಿ ಹೈಕೋರ್ಟ್‌ನಲ್ಲಿ ಸರಕಾರಿ ವಕೀಲರಾದ ಅವರು 1995ರ ಡಿಸೆಂಬರ್ 18ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಫಾರೂಕ್ ಸಲ್ಲಿಸಿದ್ದರು.

ಫಾರೂಕ್ ಅವರು ಕ್ರಿಮಿನಲ್, ಸಿವಿಲ್ ಮತ್ತು ಸಾಂವಿಧಾನಾತ್ಮಕ ಪ್ರಕರಣಗಳಲ್ಲಿ ಕೂಡಾ ನೈಪುಣ್ಯ ಹೊಂದಿದ್ದರು. ನ್ಯಾಯಮೂರ್ತಿ ಆಗಿ ನೇಮಕಗೊಳ್ಳುವ ಮುನ್ನ ಕಾನೂನು ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News