ತೈಲ ಬೆಲೆ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತದ ಹೊಡೆತ: ತುರ್ತುಸಾಲಕ್ಕೆ ಕೇಂದ್ರದ ಮೊರೆಹೋದ ಏರ್‍ಲೈನ್ಸ್ ಕಂಪನಿಗಳು

Update: 2018-11-21 09:01 GMT

ಹೊಸದಿಲ್ಲಿ, ನ.21: ತೈಲ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಭಾರತದ ಪ್ರಮುಖ ಏರ್‍ಲೈನ್ಸ್ ಕಂಪನಿಗಳು ತಮ್ಮ ಉಳಿವಿಗಾಗಿ ತೈಲ ಕಂಪನಿಗಳು ಮತ್ತು ವಿಮಾನ ನಿಲ್ದಾಣಗಳಿಂದ ಭದ್ರತಾರಹಿತ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಸರ್ಕಾರದ ಮೊರೆ ಹೋಗಿವೆ.

ತೀವ್ರ ಪೈಪೋಟಿ ಮತ್ತು ದರ ಸಮರದ ಕಾರಣದಿಂದ, ವಿಮಾನಯಾನದರ ಏರಿಕೆ ಆಗಿಲ್ಲ. ಇದರ ಜತೆಜತೆಗೆ ಕಾರ್ಯನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ಪತ್ರ  ಬರೆದಿರುವ ಭಾರತೀಯ ಏರ್‍ಲೈನ್ಸ್‍ಗಳ ಒಕ್ಕೂಟ ಈ ಮನವಿ ಮಾಡಿವೆ. ಒಕ್ಕೂಟದ ವಕ್ತಾರ ಉಜ್ವಲ್ ಡೇ ಕೂಡಾ ಇದನ್ನು ದೃಢಪಡಿಸಿದ್ದರೂ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ದೇಶೀಯ ವಾತಾವರಣದಲ್ಲಿ ಏರ್‍ಲೈನ್ಸ್ ಕಂಪನಿಗಳು ಸವಾಲಿನ ಸಂದರ್ಭವನ್ನು ಎದುರಿಸುತ್ತಿದ್ದು, ತೀವ್ರ ಸ್ವರೂಪದ ನಷ್ಟಕ್ಕೀಡಾಗಿವೆ ಎಂದು ವಿಮಾನಯಾನ ಕಾರ್ಯದರ್ಸಿ ರಾಜೀವ್ ನಾರಾಯಣ ಚೌಬೆಯವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ವಿಮಾನ ಪಯಣದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತದ ಏರ್‍ಲೈನ್ಸ್ ಕಂಪನಿಗಳು ಎದುರಿಸುತ್ತಿರುವ ಸಂಕೇತವನ್ನು ಈ ಪತ್ರ ಬಿಂಬಿಸುತ್ತದೆ. ವಿಮಾನಯಾನ ದರಗಳು ವೆಚ್ಚಕ್ಕಿಂತ ಕಡಿಮೆಯಾಗಿವೆ. ಇಂಧನ ಬೆಲೆ ಹೆಚ್ಚಳ ಮತ್ತು ರೂಪಾಯಿ ದುರ್ಬಲವಾಗಿರುವುದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಜೆಟ್ ಏರ್‍ವೇಸ್ ಇಂಡಿಯಾ ಲಿಮಿಟೆಡ್ ಈಗಾಗಲೇ, ಸಂಕಷ್ಟವನ್ನು ಎದುರಿಸುತ್ತಿದ್ದು, ಉದ್ಯೋಗಿಗಳ ಪಾವತಿಯನ್ನು ತಡ ಮಾಡಿದೆ. ಹೂಡಿಕೆದಾರರ ಜತೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಮಾತನಾಡುತ್ತಿದೆ.

ಎಫ್‍ಐಎನಲ್ಲಿ ಜೆಟ್, ಇಂಟರ್‍ಗ್ಲೋಬ್ ಏವಿಯೇಶನ್ಸ್ ಲಿಮಿಟೆಡ್‍ನ ಇಂಡಿಗೊ, ಸ್ಪೈಸ್‍ಜೆಟ್ ಲಿಮಿಟೆಡ್ ಮತ್ತು ಗೋ ಏರ್‍ಲೈನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದ್ದು, ಇವು ದೇಶೀಯ ಮಾರುಕಟ್ಟೆಯಲ್ಲಿ ಶೇಕಡ 80ರಷ್ಟು ಪಾಲು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News