ಕುಂಭ ಮೇಳ: 25 ಕೋಟಿ ರೂ. ವೆಚ್ಚದಲ್ಲಿ 112 ಐಷಾರಾಮಿ ವಾಹನ ಖರೀದಿಗೆ ಮುಂದಾದ ಆದಿತ್ಯನಾಥ್ ಸರ್ಕಾರ

Update: 2018-11-21 10:10 GMT

ಲಕ್ನೋ, ನ.21: ಪ್ರಯಾಗ್‍ರಾಜ್ (ಹಿಂದಿನ ಅಲಹಾಬಾದ್)ನಲ್ಲಿ 2019ರಲ್ಲಿ ನಡೆಯುವ ಬಹುನಿರೀಕ್ಷಿತ ಅರ್ಧ ಕುಂಭ ಮೇಳಕ್ಕೆ ಪೂರ್ವಭಾವಿಯಾಗಿ 112 ಹೊಸ ಐಷಾರಾಮಿ ವಾಹನಗಳನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುವ ಪ್ರಸ್ತಾವನೆಗೆ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಈ ಕುಂಭ ಮೇಳದಲ್ಲಿ ಭಕ್ತರು ಮತ್ತು ಸಂತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಗಳವಾರ ಲಕ್ನೋದಲ್ಲಿ ನಡೆದ ಸಂಪುಟಸಭೆಯಲ್ಲಿ ವಾಹನ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.

ಸರ್ಕಾರದ ಬಳಿ ಇರುವ ಹಳೆ ವಾಹನಗಳ ಬದಲಿಗಾಗಿ ಕೆಲ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದ್ದು, ಇತರ ವಾಹನಗಳನ್ನು ಕುಂಭ ಮೇಳದ ಭದ್ರತಾ ಸಮಸ್ಯೆಗಳ ನೆಪವೊಡ್ಡಿ ಖರೀದಿಸಲಾಗುತ್ತಿದೆ. ಈ ಬಗ್ಗೆ ವಿವರ ನೀಡಿದ ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್, ಖರೀದಿ ನಿರ್ಧಾರದ ಜತೆಗೆ ಸರ್ಕಾರ ಖರೀದಿಸಲಿರುವ ವಾಹನಗಳ ಬಗ್ಗೆಯೂ ಮಾಹಿತಿ ನೀಡಿದರು.

ಸಮರ್ಪಕವಾಗಿ ಕಾರ್ಯ ನಿರ್ವಹಿಸದ 17 ವಾಹನಗಳಿಗೆ ಬದಲಿ ವಾಹನ ಖರೀದಿಸಲಾಗುತ್ತಿದೆ. ರಾಜ್ಯ ಎಸ್ಟೆಟ್ ಇಲಾಖೆ ಇದನ್ನು ಖರೀದಿಸುತ್ತಿದೆ. ಈ ಪೈಕಿ ಐದು ಇನ್ನೊವಾ ಕ್ರೈಸ್ಟಾ, ಐದು ಸ್ಕಾರ್ಪಿಯೊ ಜಾಗೂ 7 ಹೋಂಡಾ ಸಿಟಿ ಕಾರುಗಳು ಸೇರಿವೆ. ಇದಕ್ಕೆ 2.46 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಗೋರಖ್‍ಪುರ ಹಾಗೂ ಗಾಝಿಯಾಬಾದ್‍ನಲ್ಲಿ ಅತಿಗಣ್ಯರ ಸಂಚಾರಕ್ಕೆ ವ್ಯವಸ್ಥೆ ಮಾಡಲು 16 ವಾಹನಗಳನ್ನು ಖರೀದಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಇದರಲ್ಲಿ ನಾಲ್ಕು ಸ್ಕಾರ್ಪಿಯೊ ಎಎಸ್, ಎರಡು ಜಾಮರ್ ಮುಕ್ತ ವಾಹನಗಳು, ಮೂರು ಗುಂಡುನಿರೋಧಕ ಸಫಾರಿ, ಏಳು ಟಾಟಾ ಸಫಾರಿ ಸ್ಟ್ರೋರ್ಮ್ ಇಕ್ಸ್ ಸೇರುತ್ತದೆ. ಇದರ ವೆಚ್ಚ 6.3 ಕೋಟಿ ಆಗಿದ್ದು, ಇದಲ್ಲದೇ 16.52 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News