ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆ: ಅನುದಾನ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಾಧ್ಯತೆ

Update: 2018-11-21 17:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.21: ನಗರದಿಂದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಸಲುವಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಲು ಬಿಎಂಆರ್‌ಸಿಎಲ್‌ಗೆ ತಲೆ ನೋವಾಗಿ ಪರಿಣಮಿಸಿದ್ದು, ನೂತನ ಮೆಟ್ರೋ ರೈಲು ನೀತಿ ಅನ್ವಯ ಕೇಂದ್ರದಿಂದ ಹೆಚ್ಚುವರಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಕೆಂಪೇಗೌಡ ಅಂತರ್‌ರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸೇವೆ ಸಂಪರ್ಕ ಕಲ್ಪಿಸಲು ಸುಮಾರು 5,900 ಕೋಟಿ ರೂ.ಗಳ ಅಗತ್ಯವಿದೆ. ಆದರೆ, ಇಷ್ಟು ಹಣವನ್ನು ಕ್ರೋಡೀಕರಣ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೂತನ ನೀತಿ ಅನ್ವಯ ಮುಂದಿನ ಮೂರು-ನಾಲ್ಕು ವಾರಗಳೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹಣ ನೀಡಲು ಮನವಿ ಮಾಡಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.

ನಾಗವಾರದಿಂದ ಆರ್.ಕೆ. ಹೆಗಡೆ ನಗರ, ಜಕ್ಕೂರು ಮಾರ್ಗವಾಗಿ ಕೆಐಎಗೆ 5,950 ಕೋಟಿ ರೂ.ವೆಚ್ಚದಲ್ಲಿ 29 ಕಿ.ಮಿ. ಮೆಟ್ರೊ ಮಾರ್ಗ ನಿರ್ಮಾಣದ ವಿಸೃತ ಯೋಜನಾ ವರದಿಗೆ 2017ರ ಡಿ.12ರಂದು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿತ್ತು. ತಿಂಗಳ ಹಿಂದೆಯಷ್ಟೆ ತಾಂತ್ರಿಕ ಕಾರಣದಿಂದಾಗಿ ಆರ್.ಕೆ. ಹೆಗಡೆ ನಗರ ಬದಲಾಗಿ ನಾಗವಾರ ಅಥವಾ ಕೆ.ಆರ್.ಪುರದಿಂದ ಹೊರವರ್ತಲ ರಸ್ತೆಯಲ್ಲಿ ಸಾಗಿ ಹೆಬ್ಬಾಳ, ಜಕ್ಕೂರು ಮೂಲಕ ಕೆಐಎಗೆ ಮೆಟ್ರೊ ಸಂಪರ್ಕ ಕಲ್ಪಿಸುವುದಕ್ಕೆ ನಿಗಮ ನೀಲಿನಕ್ಷೆ ಸಿದ್ಧಪಡಿಸಿದ್ದು, ಅದಕ್ಕೆ ಮೆಟ್ರೋ 2ಬಿ ಎಂದು ಹೆಸರಿಡಲಾಗಿದೆ.

ಯಾರ ಪಾಲು ಎಷ್ಟು?: ಯೋಜನೆಯ ವೆಚ್ಚದಲ್ಲಿ ಶೇ.21.01(1,250 ಕೋ.) ರಾಜ್ಯ ಸರಕಾರ, ಶೇ.8.40(500 ಕೋ.) ಕೇಂದ್ರ ಸರಕಾರದ ಪಾಲು ಇರುತ್ತದೆ. ಅದಲ್ಲದೆ, ಪ್ರತಿ ವಿಮಾನ ಪ್ರಯಾಣಿಕರಿಂದ 60 ರಿಂದ 80 ರೂ.ಗಳವರೆಗೂ ಬಳಕೆದಾರರ ಶುಲ್ಕ ವಿಧಿಸಿ ಒಂದು ಕೋಟಿ(ಶೇ.16.81) ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಿದ್ದು, ಉಳಿದ ಶೇ.53.78(3,200 ಕೋ.) ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆಯಲು ರೂಪರೇಷು ಸಿದ್ಧಪಡಿಸಿತ್ತು. ಕೆಐಎಗೆ ಮೆಟ್ರೋ ಕಾಮಗಾರಿ ಮುನ್ನವೇ ವಿಮಾನ ಪ್ರಯಾಣಿಕರಿಂದ ಬಳಕೆದಾರರ ಶುಲ್ಕ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ತಿರಸ್ಕರಿಸಿತ್ತು. ಆದರೆ, ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಿದ ಬಳಿಕ ಬಳಕೆದಾರರ ಶುಲ್ಕ ಸಂಗ್ರಹಕ್ಕೆ ಎಇಆರ್‌ಎ ಒಪ್ಪಿಗೆ ಸೂಚಿಸಿದೆ. ಈ ಸೂಚನೆ 1 ಸಾವಿರ ಕೊಟಿ ರೂ. ಸಂಪನ್ಮೂಲ ಕ್ರೋಡೀಕರಣಕ್ಕೆ ಅಡ್ಡಿಯಾಗಿದೆ.

ಖಾಸಗಿ ಸಹಭಾಗಿತ್ವ ಕಡ್ಡಾಯ: ನೂತನ ಮೆಟ್ರೋ ರೈಲು ನೀತಿ ಅನ್ವಯ ಹೊಸ ಮೆಟ್ರೊ ರೈಲು ಯೋಜನೆಗಳಿಗೆ ಕೇಂದ್ರದ ಅನುದಾನ ಪಡೆಯಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ ಅನುಸರಿಸುವುದು ಕಡ್ಡಾಯವಾಗಿದೆ. ಮೆಟ್ರೋ ಬಹುಕೊಟಿ ರೂಪಾಯಿ ಯೊಜನೆಯಾಗಿದ್ದು, ಖಾಸಗಿ ಬಂಡವಾಳ ಅಥವಾ ವಿನೂತನ ಸಂಪನ್ಮೂಲ ಕ್ರೋಡೀಕರಣ ಪಡೆಯುವುದು ಕಡ್ಡಾಯ ಎಂದು ನೀತಿಯಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಹೆಬ್ಬಾಳ, ನಾಗವಾರ, ಕೆ.ಆರ್.ಪುರ, ಯಲಹಂಕ ಭಾಗದಲ್ಲಿರುವ ಐಟಿ ಕಂಪನಿಗಳ ಜತೆ ಬಿಎಂಆರ್‌ಸಿಎಲ್ ಸಹಭಾಗಿತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.

ವಿದೇಶಿ ಸಾಲ ಹೆಚ್ಚಳ: ಮೊದಲನೇ ಹಂತದ ಮೆಟ್ರೋಗಾಗಿ ಹುಡ್ಕೋ, ಜೈಕಾ ಸಂಸ್ಥೆಗಳಿಂದ ಸುಮಾರು 5,680 ಕೋಟಿ ರೂಗಳನ್ನು, ಎರಡನೇ ಹಂತದಲ್ಲಿ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಹಾಗೂ ಏಷ್ಯನ್ ಇನ್ಫಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಿಂದ 6,700 ಕೋಟಿ ರೂ.ವರೆಗೂ ಸಾಲ ಪಡೆಯಲಾಗಿತ್ತು. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಸಾಲ ಪಡೆಯಲು ನಿರ್ಧರಿಸಿದ್ದು, ಯುಡಿಎಫ್‌ನಿಂದ ಒಂದು ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News