ವಿದ್ಯಾರ್ಥಿಗಳಿಗೆ ಗರಿಷ್ಠ ಟ್ಯೂಷನ್ ನೀಡುವ ದೇಶ ಯಾವುದು ಗೊತ್ತೇ ?

Update: 2018-11-22 04:13 GMT

ಹೊಸದಿಲ್ಲಿ, ನ. 22: ಭಾರತೀಯ ವಿದ್ಯಾರ್ಥಿಗಳು ಇಡೀ ವಿಶ್ವದಲ್ಲೇ ಗರಿಷ್ಠ ಟ್ಯೂಷನ್ ಪಡೆಯುವ ವಿದ್ಯಾರ್ಥಿಗಳು ಎನಿಸಿಕೊಂಡಿದ್ದಾರೆ.

ಶೇಕಡ 74ರಷ್ಟು ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಟ್ಯೂಷನ್ ಪಡೆಯುತ್ತಾರೆ ಎಂಬ ಅಂಶ ಜಾಗತಿಕ ಮಟ್ಟದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಆದರೆ ಶೇ. 72ರಷ್ಟು ಭಾರತೀಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಜಾಗತಿಕ ಶೈಕ್ಷಣಿಕ ಸಮೀಕ್ಷೆ ಹೇಳಿದೆ.

ಆದರೆ ಪಠ್ಯೇತರ ಚಟುವಟಿಕೆಗಳ ಪೈಕಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತೆ ಖಾತ್ರಿಪಡಿಸುವ ಬದ್ಧತೆ ಭಾರತೀಯ ಶಿಕ್ಷಕರಲ್ಲಿ ಅಧಿಕವಾಗಿದೆ ಎನ್ನುವ ಅಂಶ ಕೂಡಾ ಸಮೀಕ್ಷೆಯಿಂದ ಗೊತ್ತಾಗಿದೆ.

ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾಲ್ಗೊಳ್ಳುವಿಕೆಯಲ್ಲೂ ಭಾರತ ಅಗ್ರಸ್ಥಾನಿ. ಸಮೀಕ್ಷೆಗೆ ಒಳಪಡಿಸಿದ ಶೇಕಡ 66ರಷ್ಟು ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಶಾಲೆಗಳಲ್ಲಿ ವಿಚಾರಿಸುತ್ತಾರೆ ಹಾಗೂ ಶೇಕಡ 50ರಷ್ಟು ಪೋಷಕರು ವಿವಿಧ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕ್ಯಾಂಬ್ರಿಡ್ಜ್ ಇಂಟರ್‌ನ್ಯಾಷನಲ್‌ನ ಜಾಗತಿಕ ಶಿಕ್ಷಣ ಗಣತಿ ವರದಿಯ ಅಂಗವಾಗಿ ಅಮೆರಿಕ, ಪಾಕಿಸ್ತಾನ, ಮಲೇಷ್ಯಾ, ದಕ್ಷಿಣ ಆಫ್ರಿಕಾ ಹಾಗೂ ಅರ್ಜೆಂಟೀನಾ ಸೇರಿದಂತೆ 10 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ಆದರೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯಲ್ಲಿ ಭಾರತೀಯ ಮಕ್ಕಳು ತೀರಾ ಹಿಂದಿದ್ದಾರೆ. ಶೇಕಡ 3ರಷ್ಟು ಮಕ್ಕಳು ವಾರಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಅಂಶವೂ ಸಮೀಕ್ಷೆಯಿಂದ ತಿಳಿದುಬಂದಿದೆ.

ಭಾರತೀಯ ವಿದ್ಯಾರ್ಥಿಗಳ ವೃತ್ತಿ ಆಯ್ಕೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಇನ್ನೂ ಮೊದಲ ಆದ್ಯತೆಯಾಗಿದೆ. ಅಂತೆಯೇ ವಿಜ್ಞಾನಿ ಗಳಾಗಬಯಸುವ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ (ಶೇಕಡ 8) ಕೂಡಾ ಅಧಿಕ. ಶೇ. 16ರಷ್ಟು ವಿದ್ಯಾರ್ಥಿಗಳು ಸಾಫ್ಟ್‌ವೇರ್ ಎಂಜಿನಿಯರ್‌ ಗಳಾಗಬಯಸಿದ್ದು, ಇದು ಕೂಡಾ ವಿಶ್ವದಲ್ಲೇ ಗರಿಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News