''ಪರಸ್ಪರ ವೈರುದ್ಧ್ಯದ ಸಿದ್ಧಾಂತ ಹೊಂದಿದ ಪಕ್ಷಗಳು ಸ್ಥಿರ ಸರಕಾರ ಒದಗಿಸಲು ಸಾಧ್ಯವಿಲ್ಲ''

Update: 2018-11-22 07:58 GMT

ಜಮ್ಮು, ನ. 22: ಪರಸ್ಪರ ವೈರುದ್ಧ್ಯದ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಸ್ಥಿರ ಸರಕಾರ ರಚಿಸಲು ಸಾಧ್ಯವಿಲ್ಲದ ಕಾರಣ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ವಿರೋಧಿ ಪಕ್ಷಗಳ ಶಾಸಕರನ್ನು ಸೆಳೆದು ಸರಕಾರಕ್ಕೆ ಬೆಂಬಲ ಪಡೆಯುವ ಸಲುವಾಗಿ ಕುದುರೆ ವ್ಯಾಪಾರ ಹಾಗೂ ಹಣದ ವಹಿವಾಟು ನಡೆಯುತ್ತಿದೆ ಎಂಬ ವರದಿಗಳತ್ತವೂ ರಾಜ್ಯಪಾಲರು ಬೊಟ್ಟು ಮಾಡಿ ತೋರಿಸಿದ್ದಾರೆ.

ಇಂತಹ ಚಟುವಟಿಕೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗೂ ರಾಜಕೀಯ ಕ್ಷೇತ್ರವನ್ನೂ ಅವು ಕಲುಷಿತಗೊಳಿಸುತ್ತವೆ. ಇಂತಹ ಒಂದು ಮೈತ್ರಿ ಸಾಧಿಸಲ್ಪಟ್ಟರೂ ಅದು ಎಷ್ಟು ಕಾಲ ಬಾಳಬಹುದು ಎಂಬ ಬಗ್ಗೆ ಸಂಶಯವಿರುತ್ತದೆ. ಇಂತಹ ಪಕ್ಷಗಳು ಜತೆಯಾಗುತ್ತಿರುವುದು ಕೇವಲ ಅಧಿಕಾರ ಪಡೆಯುವ ಸಲುವಾಗಿಯೇ ಹೊರತು ಉತ್ತಮ ಸರಕಾರ ನೀಡಲು ಅಲ್ಲ'' ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಈಗಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಅಲ್ಲಿ ಭದ್ರತಾ ಪಡೆಗಳಿಗೆ ಉಗ್ರರ ನಿಗ್ರಹ ಕಾರ್ಯಾಚರಣೆಗೆ ಅನುಕೂಲಕರ ವಾತಾವಾರಣ ಸೃಷ್ಟಿಸುವ ಅಗತ್ಯವಿದೆ ಹಾಗೂ ಇಲ್ಲಿನ ಪರಿಸ್ಥಿತಿಯ ಮೇಲೆ ಭದ್ರತಾ ಪಡೆಗಳು ಸಂಪೂರ್ಣ ನಿಯಂತ್ರಣ ಹೊಂದುವತ್ತ ಶ್ರಮಿಸುತ್ತಿವೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜಿಸಿ ಮುಂದೆ ಸೂಕ್ತ ಕಾಲದಲ್ಲಿ ಚುನಾವಣೆ ನಡೆಸಿ ಜನಾದೇಶ ಪಡೆದು ಸರಕಾರ ರಚಿಸುವುದೇ ಸೂಕ್ತ ಎಂದು ತಾನು ನಿರ್ಧರಿಸಿರುವುದಾಗಿ ರಾಜ್ಯಪಾಲರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News