ವಾಯು ಮಾಲಿನ್ಯ ನಿಯಂತ್ರಣಕ್ಕೆ ಈಗಿಂದಲೇ ಎಚ್ಚರಿಕೆ ವಹಿಸಬೇಕು: ಉಪಮುಖ್ಯಮಂತ್ರಿ ಡಾ. ಪರಮೇಶ್ವರ್

Update: 2018-11-22 10:32 GMT

ಬೆಂಗಳೂರು, ನ. 22: ಕಸದ ನಿರ್ವಹಣೆಯಲ್ಲಿ ಉತ್ತಮ ಪ್ರಾಜೆಕ್ಟ್‌ ಸಿದ್ಧ ಪಡಿಸಿದ ಡಿಸೈನ್‌ ಬೆಂಗಳೂರು ಚಾಲೆಂಜ್‌ನ ವಿಜೇತರಾದ ಹಸಿರು ದಳ ಇನೋವೇಷನ್ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಡಿಸೈನ್‌ ಬೆಂಗಳೂರು ಚಾಲೆಂಜ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದ ಬೆಂಗಳೂರು 30 ಲಕ್ಷ ಜನಸಂಖ್ಯೆ ಹೊಂದಿತ್ತು. ಇಂದು ಕೋಟಿ ಸಂಖ್ಯೆ ದಾಟಿದೆ. ಇದರ ಜೊತೆಗೆ ನಗರದಲ್ಲಿ ಮೂಲ ಸಮಸ್ಯೆಯನ್ನೂ ಹುಟ್ಟು ಹಾಕಲಾಗಿದೆ. ಕಸ, ಟ್ರಾಫಿಕ್‌, ನೀರು ಪೂರೈಕೆ, ವಿದ್ಯುತ್‌ ಸೇರಿದಂತೆ ಸಾಕಷ್ಟು‌ ಸಮಸ್ಯೆಗಳು ಅತಿಯಾಗಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕವಾಗಿ ಹಾಗೂ ಕಾರ್ಪೋರೇಟ್‌ ಕಂಪನಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಕೆಲವರು ಒಂದಷ್ಟು ಒಳ್ಳೆಯ ಯೋಜನೆಗಳನ್ನು ತಯಾರಿಸಿದ್ದಾರೆ. ಶೀಘ್ರವೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಇನ್ನಷ್ಟು ಜಟಿಲವಾಗಲಿದೆ ಎಂದರು.

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿರುವುದರಿಂದ ಖಾಸಗಿ ವಾಹನಗಳನ್ನು ಬ್ಯಾನ್‌ ಮಾಡುವ ಉದ್ದೇಶ ಹೊಂದಿದೆ. ಬೆಂಗಳೂರಿನಲ್ಲಿ ಈ ನಿರ್ಧಾರ ಕೈಗೊಂಡರೆ ಜನಸಾಮಾನ್ಯರು ತಿರುಗಿ ಬೀಳುತ್ತಾರೆ.‌ ವಾಹನಗಳನ್ನು ಬ್ಯಾನ್ ಮಾಡುವ ಮಟ್ಟಕ್ಕೆ ತಲುಪದೇ, ಈಗಿನಿಂದಲೇ ಮಾಲಿನ್ಯ‌ನಿಯಂತ್ರಣ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ನಿಲ್ಲಿಸುವ ಯೋಜನೆ ಇದೆ. ಈ ಬಗ್ಗೆ ಪರಿಶೀಲಿಸಲಾ ಗುತ್ತಿದೆ ಎಂದು ಹೇಳಿದರು.

ಡಿಸೈನ್‌ ಬೆಂಗಳೂರು ಚಾಲೆಂಜ್‌ನಲ್ಲಿ ಸಾಕಷ್ಟು ಉತ್ತಮ ಪ್ರಾಜೆಕ್ಟ್‌ಗಳು ವ್ಯಕ್ತವಾಗಿವೆ. ವಿಜೇತಗೊಂಡ ತಂಡದಿಂದ ಕಸ ನಿರ್ವಹಣೆಯ ಬಗ್ಗೆ ಉತ್ತಮ ಪ್ರಾಜೆಕ್ಟ್‌ ಮಾಡಿದ್ದು, ಇದರ ಅನುಷ್ಠಾನಕ್ಕೆ ಕ್ರಮ‌ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News