ಕೊಳೆತ ಎಲೆಯಡಿಕೆ ಭಾರತಕ್ಕೆ ಕಳ್ಳಸಾಗಣೆ ಜಾಲ ಪತ್ತೆ: ವಿಚಾರಣೆ ವೇಳೆ ಹೊರಬಿತ್ತು ಈ ವಿಶ್ವಪ್ರಸಿದ್ಧ ಕ್ರಿಕೆಟಿಗನ ಹೆಸರು

Update: 2018-11-22 11:02 GMT

ಹೊಸದಿಲ್ಲಿ, ನ. 22 : ಕೊಳೆತ ಎಲೆಯಡಿಕೆಯನ್ನು ಭಾರತಕ್ಕೆ ಕಳ್ಳಸಾಗಣಿಕೆ ನಡೆಸಿದ ಪ್ರಕರಣದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಮತ್ತು ಇತರ ಇಬ್ಬರು ಕ್ರಿಕೆಟಿಗರು ತನಿಖೆ ಎದುರಿಸುತ್ತಿದ್ದಾರೆ.

ಕಂದಾಯ ಗುಪ್ತಚರ ನಿರ್ದೇಶನಾಲಯ ಇತ್ತೀಚೆಗೆ ಲಕ್ಷಗಟ್ಟಲೆ ಬೆಲೆಯ ಎಲೆಯಡಿಕೆಯನ್ನು ನಾಗ್ಪುರದಲ್ಲಿ ವಶಪಡಿಸಿಕೊಂಡ ನಂತರ ತನಿಖೆ ವೇಳೆ ಜಯಸೂರ್ಯ ಹೆಸರೂ ಈ ಪ್ರಕರಣದಲ್ಲಿ ಕೇಳಿ ಬಂತು ಎಂದು ತಿಳಿದು ಬಂದಿದೆ.

ಜಯಸೂರ್ಯ ಅವರನ್ನು ಮುಂಬೈಗೆ ವಿಚಾರಣೆಗಾಗಿ ಕಂದಾಯ ಗುಪ್ತಚರ ಅಧಿಕಾರಿಗಳು ಕರೆಸಿದ್ದು ನಂತರ ಮುಂದಿನ ವಿಚಾರಣೆಗಾಗಿ ಶ್ರೀಲಂಕಾ ಸರಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ. ಈ ಪ್ರಕರಣಗಳಲ್ಲಿ ಆರೋಪ ಹೊತ್ತ ಇತರ ಇಬ್ಬರು ಕ್ರಿಕೆಟಿಗರನ್ನೂ ವಿಚಾರಣೆಗಾಗಿ  ಡಿ. 2ರೊಳಗಾಗಿ ಕರೆಸಲಾಗುವುದು ಎಂದು ಹೇಳಲಾಗಿದೆ.

ವಶಪಡಿಸಿಕೊಳ್ಳಲಾದ ಕೊಳೆತ ಎಲೆಯಡಿಕೆಯನ್ನು ಮೊದಲು  ಇಂಡೋನೇಷ್ಯಾದಿಂದ ಶ್ರೀಲಂಕಾಗೆ ತರಿಸಲಾಗಿದ್ದು ಅಲ್ಲಿಂದ ನಂತರ ಭಾರತಕ್ಕೆ ಕಳ್ಳಸಾಗಣೆ ನಡೆಸಲಾಗಿದೆ. ಈ ಕಾರ್ಯಾಚರಣೆಗಾಗಿ ಶ್ರೀಲಂಕಾದಲ್ಲಿ ಕೆಲ ಬೇನಾಮಿ ಕಂಪೆನಿಗಳನ್ನು ಸೃಷ್ಟಿಸಲಾಗಿತ್ತು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಈ ಬೇನಾಮಿ ಕಂಪೆನಿಗಳಿಗೆ ಪರವಾನಗಿ ಪಡೆಯಲು ಆರೋಪಿ ಕ್ರಿಕೆಟಿಗರು ತಮ್ಮ ಪ್ರಭಾವ ಬಳಸಿಕೊಂಡಿದ್ದರೆನ್ನಲಾಗಿದೆ. ಆಮದು ಸುಂಕ ತಪ್ಪಿಸುವ ಸಲುವಾಗಿ ಎಲೆಯಡಿಕೆ ಶ್ರೀಲಂಕಾದಲ್ಲಿಯೇ ಉತ್ಪಾದನೆಗೊಂಡಿತ್ತೆಂಬುದಕ್ಕೆ ನಕಲಿ ಪ್ರಮಾಣ ಪತ್ರ ಕೂಡ ಸಿದ್ಧಗೊಂಡಿತ್ತು. ನಾಗ್ಪುರದ ಉದ್ಯಮಿ ಪ್ರಕಾಶ್ ಗೋಯಲ್ ಎಂಬವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು ಅವರ ಫ್ಯಾಕ್ಟರಿಯನ್ನು ಸೀಲ್ ಮಾಡಲಾಗಿದೆ. ಇದಕ್ಕೂ ಮುಂಚೆ ಮುಂಬೈ ಉದ್ಯಮಿ ಫಾರೂಕ್ ಖುರಾನಿ ಎಂಬಾತನನ್ನು ಈ ಪ್ರಕರಣ ಕುರಿತಂತೆ ಬಂಧಿಸಲಾಗಿದೆ.

ಎಲೆಯಡಿಕೆಯನ್ನು ಇಂಡೋನೇಷ್ಯಾದಿಂದ ನೇರವಾಗಿ ಆಮದುಗೊಳಿಸುವುದಾದರೆ ಶೇ 108 ಆಮದು ಸುಂಕ ವಿಧಿಸಲಾಗುತ್ತದೆ ಆದರೆ  ಶ್ರೀಲಂಕಾ ಮೂಲಕ ತರಿಸಿದರೆ ಈ ಸುಂಕ ಪಾವತಿಸುವ ಅಗತ್ಯವಿಲ್ಲ. ಇದು ದಕ್ಷಿಣ ಏಷ್ಯಾ ಅನಿರ್ಬಂಧಿತ ವಹಿವಾಟು ಪ್ರದೇಶದಲ್ಲಿ ಬರುವುದರಿಂದ ಇಲ್ಲಿ ಸುಂಕದ ಅಗತ್ಯವಿಲ್ಲವಾಗಿದೆ.

ಇಂಡೋನೇಷ್ಯಾದಿಂದ ತರಿಸಲಾಗುವ ಕೊಳೆತ ಎಲೆಯಡಿಕೆಗೆ ಮೂಲ ಬೆಲೆಯ ಶೇ 25ರಷ್ಟು ಮಾತ್ರ ಪಾವತಿಸಲಾಗಬೇಕಾಗಿರುವುದರಿಂದ ಇಲ್ಲಿನ ಉದ್ಯಮಿಗಳಿಗೆ ಬಹಳಷ್ಟು ಲಾಭವಿದ್ದು ಉತ್ತಮ ಎಲೆಯಡಿಕೆಗಳೊಂದಿಗೆ ಸೇರಿಸಿ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ಚಟುವಟಿಕೆಯ ಕೇಂದ್ರ ಸ್ಥಾನ ನಾಗ್ಪುರ್ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News