ಪಾಕ್: ಆತ್ಮಹತ್ಯಾ ಬಾಂಬ್ ದಾಳಿಗೆ 35 ಬಲಿ

Update: 2018-11-23 14:41 GMT

ಪೇಶಾವರ (ಪಾಕಿಸ್ತಾನ), ನ. 23: ವಾಯುವ್ಯ ಪಾಕಿಸ್ತಾನದ ಒರಕ್‌ಝಾಯಿ ಪಟ್ಟಣದಲ್ಲಿ ಶುಕ್ರವಾರ ನಡೆದ ಜಾತ್ರೆ ಮತ್ತು ಸಂತೆಯೊಂದರಲ್ಲಿ ಸೇರಿದ ಜನರನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.

ಕರಾಚಿಯಲ್ಲಿರುವ ಚೀನಾ ಕೌನ್ಸುಲೇಟ್ ಕಚೇರಿಯ ಮೇಲೆ ನಡೆದ ದಾಳಿಯ ಸಮಯದಲ್ಲೇ, ಅಂದರೆ ಬೆಳಗ್ಗಿನ ಸುಮಾರು 9 ಗಂಟೆಯ ವೇಳೆ ಈ ದಾಳಿ ನಡೆದಿದೆ.

ಆದಾಗ್ಯೂ, ಈ ಎರಡು ದಾಳಿಗಳ ನಡುವೆ ಸಂಬಂಧವಿರುವ ಸಾಧ್ಯತೆ ವಿರಳವಾಗಿದೆ.

ಒರಕ್‌ಝಾಯಿಯಲ್ಲಿ ಒಂದು ಜಾತ್ರೆ ಮತ್ತು ಸಂತೆ ನಡೆಯುತ್ತಿತ್ತು. ಇವುಗಳಲ್ಲಿ ವಿವಿಧ ಧರ್ಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮೋಟರ್‌ಸೈಕಲ್‌ನಲ್ಲಿ ಜನರ ನಡುವೆ ನುಗ್ಗಿದ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡನು.

ಯಾವುದೇ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

‘‘ಪ್ರತಿ ಶುಕ್ರವಾರ ನಡೆಯುವ ಜಾತ್ರೆ ಮತ್ತು ಸಂತೆಯನ್ನು ಗುರಿಯಾಗಿಸಿ ನಡೆದ ಆತ್ಮಹತ್ಯಾ ದಾಳಿ ಅದಾಗಿತ್ತು’’ ಎಂದು ಜಿಲ್ಲೆಯ ಸಹಾಯಕ ಕಮಿಶನರ್ ಅಬ್ಬಾಸ್ ಖಾನ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News