ಮೈತ್ರಿ ಸರಕಾರ ಸತ್ತು ಹೋಗಿದೆ: ಜಗದೀಶ್ ಶೆಟ್ಟರ್

Update: 2018-11-23 12:38 GMT

ಬೆಂಗಳೂರು, ನ. 23: ‘ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಈ ಸರಕಾರ ಅಸ್ತಿತ್ವದಲ್ಲೆ ಇಲ್ಲ, ಸತ್ತು ಹೋಗಿದೆ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ವಿಪಕ್ಷ ನಾಯಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದಾರು ತಿಂಗಳಿಂದ ಪಿಂಚಣಿ ನೀಡಲು ಈ ಸರಕಾರದ ಬಳಿ ಹಣವಿಲ್ಲ. ವಿವಿಧ ಕಾಮಗಾರಿಗಳ 6 ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ. ಇನ್ನೂ 46 ಸಾವಿರ ಕೋಟಿ ರೂ.ರೈತರ ಸಾಲಮನ್ನಾವೂ ಆಗಿಲ್ಲ. ಸರಕಾರದ ಖಜಾನೆ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರ ನಿಧಿ ವಾರ್ಷಿಕ 2ಕೋಟಿ ರೂ.ಬಿಡುಗಡೆ ಮಾಡಬೇಕು. ಆದರೆ, ಈವರೆಗೂ ಕೇವಲ 50ಲಕ್ಷ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಯಾವುದೇ ಕಳಕಳಿ ಇಲ್ಲ ಎಂದು ಶೆಟ್ಟರ್ ದೂರಿದರು.

ಸ್ವೀಕರಿಸುವ ಮನಸ್ಥಿತಿ ಇಲ್ಲ: ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮನಸ್ಥಿತಿಯೇ ಸಿಎಂಗೆ ಇಲ್ಲ. ವಿಪಕ್ಷ ಮತ್ತು ಮಾಧ್ಯಮಗಳು ನಿಮ್ಮನ್ನು ಹೊಗಳಲು ಇಲ್ಲಿ ಇಲ್ಲ ಎಂದ ಶೆಟ್ಟರ್, ಸಹಕಾರ ಸಚಿವರು ಸಾಲಮನ್ನಾ ಮಾಹಿತಿ ಸಂಗ್ರಹಿಸುತ್ತೇವೆಂದು ಹೇಳಿದ್ದಾರೆ. ಇನ್ನೂ ಎಷ್ಟು ದಿನ ಈ ಕೆಲಸ ಎಂದು ಪ್ರಶ್ನಿಸಿದರು.

ಕಬ್ಬು ಬೆಳೆಗಾರರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಿಸಿ, ಇದೀಗ ಉದ್ವಿಗ್ನಗೊಂಡ ರೈತರು ಪ್ರತಿಭಟನೆ ವೇಳೆ ಗೇಟ್‌ನ ಬೀಗ ಮುರಿದರೆಂದು ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ. ಮೊದಲು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಶೆಟ್ಟರ್ ಆಗ್ರಹಿಸಿದರು.

ಪ್ರತಿಷ್ಠೆಗೆ ಅಭಿವೃದ್ಧಿ ಬಲಿ: ಹಾಸನದ ವೈಯಕ್ತಿಕ ಪ್ರತಿಷ್ಠೆಗೆ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದ್ದು, ನಿಮ್ಮ ಹೊಂದಾಣಿಕೆ ರಾಜಕೀಯಕ್ಕೆ ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ, ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು 58 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸರಕಾರಿ ಸೇರಿ ಐದು ಇಂಜಿನಿಯರಿಂಗ್ ಕಾಲೇಜುಗಳಿದ್ದರೂ, ವಿದ್ಯಾರ್ಥಿಗಳ ಕೊರತೆ ಇದೆ. ವಸ್ತು ಸ್ಥಿತಿ ಹೀಗಿರುವಾಗ ಮತ್ತೊಂದು ಎಂಜಿನಿಯರಿಂಗ್ ಕಾಲೇಜಿನ ಅಗತ್ಯವೇನಿತ್ತು ಎಂದು ರವಿ ಪ್ರಶ್ನಿಸಿದರು.

ಶ್ವೇತಪತ್ರ ಹೊರಡಿಸಿ: ರಾಜ್ಯದ ಜನತೆ ಈ ಸರಕಾರ ನೀಡಿದ ಭರವಸೆ ಮತ್ತು ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ ಅವರು, ಉಪ ಚುನಾವಣೆ ಗೆಲ್ಲಲು ನೀಡಿದ ಆದ್ಯತೆಯನ್ನು ಬರ-ನೆರೆ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸರಕಾರ ನೀಡಲಿಲ್ಲ ಎಂದು ಆಕ್ಷೇಪಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಉದ್ದೇಶವನ್ನು ನಾನು ಹೊಂದಿಲ್ಲ. ಆದರೆ, ಪಕ್ಷ ಸಂಘಟನೆ ದೃಷ್ಟಿಯಿಂದ ವರಿಷ್ಠರು ಸೂಚಿಸಿದರೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹಾಸನ ಲೋಕಸಭೆಯಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ.’

-ಸಿ.ಟಿ.ರವಿ, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News