ಪ್ರವಾಹ ಪರಿಹಾರ ಕಾರ್ಯ: ಕೇಂದ್ರದಿಂದ 546 ಕೋಟಿ ರೂ. ಬಿಡುಗಡೆ; ಸಚಿವ ಆರ್.ವಿ.ದೇಶಪಾಂಡೆ

Update: 2018-11-23 15:00 GMT

ಬೆಂಗಳೂರು, ನ.23: ರಾಜ್ಯದಲ್ಲಿ ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿಗೆ 720.53 ಕೋಟಿ ರೂ.ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರನ್ವಯ ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ನ.19ರಂದು 546.21 ಕೋಟಿ ರೂ.ಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರಕಾರದ ಅಂತರ-ಸಚಿವಾಲಯದ ಆರು ಸದಸ್ಯರ ತಂಡವು ಸೆ.12 ಮತ್ತು 13ರಂದು ಪ್ರವಾಹಪೀಡಿತ ಕೊಡಗು ಜಿಲ್ಲೆ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು ಎಂದರು.

ಕೇಂದ್ರ ಸರಕಾರವು ಬಿಡುಗಡೆ ಮಾಡಿರುವ 546.21 ಕೋಟಿ ರೂ.ಗಳಲ್ಲಿ ಇನ್‌ಪುಟ್ ಸಬ್ಸಿಡಿ ಭಾಗವಾಗಿ 323.87 ಕೋಟಿ ರೂ., ಮನೆ ಹಾನಿಗೆ 74.79 ಕೋಟಿ ರೂ., ಮೂಲಸೌಕರ್ಯ ಹಾನಿಗೆ (ರಸ್ತೆ, ಸೇತುವೆ, ಇತ್ಯಾದಿ) 139.26 ಕೋಟಿ ರೂ.ಹಾಗೂ ಮನೆ ಬಳಕೆ ವಸ್ತುಗಳ ಹಾನಿಗಾಗಿ 8 ಕೋಟಿ ರೂ. ನೆರವನ್ನು ನೀಡಿದೆ ಎಂದು ಅವರು ಹೇಳಿದರು.

ರಾಜ್ಯವು ಪ್ರವಾಹ ಹಾಗೂ ಬರಗಾಲ ಎರಡನ್ನು ಎದುರಿಸುತ್ತಿದ್ದು, 24 ಜಿಲ್ಲೆಗಳ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಎನ್‌ಡಿಆರ್‌ಎಫ್ ಅಡಿ ಅನುದಾನ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ವ್ಯಾಪಕ ಪ್ರವಾಸ ಕೈಗೊಂಡಿದ್ದ ಅಂತರ ಸಚಿವಾಲಯ ಕೇಂದ್ರ ತಂಡವೂ ಈ ತಿಂಗಳ ಕೊನೆಯ ಹೊತ್ತಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ ತನ್ನ ವರದಿ ಸಲ್ಲಿಸಲಿದೆ. ಹೀಗಾಗಿ ಎನ್‌ಡಿಆರ್‌ಎಫ್ ನಿಧಿಯ ಮೂಲಕ ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಕಡತ ವಿಲೇವಾರಿ ಸಪ್ತಾಹ: ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ಶೀಘ್ರವಾಗಿ ವಿಲೇಗೊಳಿಸಲು, ನ.12 ರಿಂದ 18ರವರೆಗೆ ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹವನ್ನು ಹಮ್ಮಿಕೊಂಡು ಸುಮಾರು 2.56 ಲಕ್ಷ ಕಡತಗಳನ್ನು ವಿಲೇಗೊಳಿಸಲಾಗಿದೆ. ಇನ್ನೂ ಬಾಕಿ ಇರುವ ಕಡತಗಳ ವಿಲೇವಾರಿಗಾಗಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವು ಕಾರ್ಯತಂತ್ರಗಳನ್ನು ರೂಪಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

ನಮೂನೆ-57 ರಡಿ ಅರ್ಜಿ ಸಲ್ಲಿಸಲು ಅವಕಾಶ: ಕರ್ನಾಟಕ ಭೂ ಕಂದಾಯ ನಿಯಮಗಳು 1966 ರ ನಿಯಮ 108 ಸಿಸಿಸಿ ರಡಿ ಸರಕಾರಿ ಜಮೀನಿನಲ್ಲಿ ಅನಧಿಕೃತ ಅಧಿಭೋಗವನ್ನು ಹೊಂದಿದವರಿಗೆ ಜಮೀನು ಸಕ್ರಮೀಕರಣಕ್ಕಾಗಿ ನಮೂನೆ 57 ರಲ್ಲಿ 2019ರ ಮಾ.16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಅದರಂತೆ ತಾಲೂಕಿನ ತಹಶೀಲ್ದಾರರು ಅರ್ಹ ಅರ್ಜಿದಾರರಿಂದ ನಮೂನೆ 57 ರಲ್ಲಿ 100 ರೂ.ಶುಲ್ಕದೊಂದಿಗೆ ಅರ್ಜಿ ಸ್ವೀಕರಿಸಿ ಅದನ್ನು ಜೇಷ್ಠತಾ ಕ್ರಮದಲ್ಲಿ ನಮೂನೆ 58ರ ರಿಜಿಸ್ಟರ್‌ನಲ್ಲಿ ನಮೂದಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಪಾರದರ್ಶಕತೆ ನೀಡುವ ನಿಟ್ಟಿನಲ್ಲಿ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಸಂಗಹ್ರಿಸಲು ಹಾಗೂ ನಮೂನೆ 58ರ ರಿಜಿಸ್ಟರ್‌ಅನ್ನು ಗಣಕೀಕೃತಗೊಳಿಸಲು ಅನುವಾಗುವಂತೆ ಸೂಕ್ತ ತಂತ್ರಾಂಶ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳೇ ನೇರ ನೇಮಕಾತಿಯಡಿ ಭರ್ತಿ ಮಾಡಲು ಅವಕಾಶವಿದೆ. ಆದರೆ, ದ್ವಿತೀಯ ದರ್ಜೆ ಸಹಾಯಕರನ್ನು ಹೀಗೆ ನೇಮಿಸಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗಿಲ್ಲ. ಹೀಗಾಗಿ, ಎಸ್‌ಡಿಎ ನೇಮಕಾತಿಗೂ ಕೂಡ ಜಿಲ್ಲಾಧಿಕಾರಿಗಳನ್ನೇ ನೇಮಕ ಪ್ರಾಧಿಕಾರಿಗಳನ್ನಾಗಿ ಪರಿಗಣಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಈ ಬಗ್ಗೆ ರಾಜ್ಯ ಲೋಕಸೇವಾ ಆಯೋಗ, ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತಿತರ ಸಂಬಂಧಿತ ಇಲಾಖೆಗಳ ಅಭಿಪ್ರಾಯವನ್ನು ಪಡೆದು, ನಂತರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News