ಗೌರಿ ಲಂಕೇಶ್ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ 9 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

Update: 2018-11-23 15:12 GMT

ಬೆಂಗಳೂರು, ನ.23: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋಕಾ ವಿಶೇಷ ನ್ಯಾಯಾಲಯಕ್ಕೆ 9,235 ಪುಟಗಳ ಹೆಚ್ಚುವರಿ ಚಾರ್ಚ್‌ಶೀಟ್ ಅನ್ನು ಶುಕ್ರವಾರ ಸಲ್ಲಿಸಿದೆ.

ಸಿಟ್ ತನಿಖಾ ತಂಡವು ಸಿಟ್ ತನಿಖಾಧಿಕಾರಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ 9,235 ಪುಟಗಳ ಪುಟಗಳ ವಿಸ್ತಾರವಾದ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಗೌರಿ ಲಂಕೇಶ್ ಕೊಲೆ ಪ್ರಕರಣ ಸಂಬಂಧ ಅತ್ಯಂತ ದೀರ್ಘವಾದ ಚಾರ್ಜ್‌ಶೀಟ್ ಇದಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ 18 ಮಂದಿ ಆರೋಪಿಗಳಲ್ಲಿ 16 ಬಂಧಿತರು ಮತ್ತು ಇಬ್ಬರು ಆರೋಪಿಗಳು ನಾಪತ್ತೆಯಾಗಿರುವುದಾಗಿ ಉಲ್ಲೇಖವಾಗಿದೆ. ದಾದಾ ಅಲಿಯಾಸ್ ನೇಹಾಲ್ ಹಾಗೂ ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾರೆ. ಸುಮಾರು 450ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದೆ ಎಂದು ಸಿಟ್ ಮೂಲಗಳು ತಿಳಿಸಿವೆ.

‘ಇಬ್ಬರು ಸಿಕ್ಕಿಲ್ಲ’

ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಕೋಕಾ ವಿಶೇಷ ನ್ಯಾಯಾಲಯಕ್ಕೆ 18 ಆರೋಪಿಗಳ ವಿರುದ್ಧ 9,235 ಪುಟಗಳ ಹೆಚ್ಚುವರಿ ಚಾರ್ಚ್‌ಶೀಟ್ ಅನ್ನು ಸಲ್ಲಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿ ಕೋರಲಾಗಿದೆ. ಇಬ್ಬರು ಆರೋಪಿಗಳು ನಾಪತ್ತೆ ಆಗಿದ್ದಾರೆ.

-ಎಂ.ಎನ್. ಅನುಚೇತ್, ಸಿಟ್ ತನಿಖಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News