ಮೋದಿ ಸರಕಾರ ರೈತರಿಗಾಗಿ ಯೋಜನೆಗಳನ್ನೆ ಘೋಷಿಸಿಲ್ಲ: ಮೇಧಾ ಪಾಟ್ಕರ್

Update: 2018-11-23 15:31 GMT

ಬೆಂಗಳೂರು, ನ.23: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪರವಾದ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಸಾಮಾಜಿಕ ಹೋರಾಟಗಾರ ಫಾದರ್ ಡಾ.ಆಂಬ್ರೋಸ್ ಪಿಂಟೋ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸಲು ಸಂಘ ಸಂಸ್ಥೆಗಳು ಶ್ರಮಿಸಬೇಕಾಗಿದೆ ಎಂದ ಅವರು, ರೈತರ ಸಮಸ್ಯೆಗಳಿಗೆ ಸ್ವಾಮಿನಾಥನ್ ವರದಿ ಜಾರಿಯಿಂದ ಪರಿಹಾರ ದೊರೆಯಲಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ಆತ್ಮಹತ್ಯೆಗಳು ಮುಂದುವರೆಯುತ್ತಿದೆ. ಈ ಬೆಳವಣಿಗೆ ತಡೆಯಲು ರೈತರ ಬೆಳೆಗೆ ಸೂಕ್ತ ಬೆಲೆ ಒದಗಿಸಬೇಕಾಗಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ ಬಂದ 70 ದಶಕಗಳು ಕಳೆದರೂ ರೈತರಿಗೆ ತಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಉತ್ಪನ್ನಗಳಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳುವುದಕ್ಕೆ ಸಾಧ್ಯವಾಗದಂತಾಗಿದೆ. ಪರಿಣಾಮ ಇಂದಿಗೂ ಅತಂತ್ರದಲ್ಲಿ ಜೀವನ ನಡೆಸುವಂತಾಗಿದೆ ಎಂದರು.

ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸುತ್ತವೆ. ಆದರೆ, ಅಧಿಕಾರಕ್ಕೆ ಬಂದ ಬಳಿಕ ಪ್ರಣಾಳಿಕೆ ಲದ್ದಿಯಾಗಲಿದ್ದು, ಯಾವುದೇ ಭರವಸೆಯೂ ಈಡೇರುವುದಿಲ್ಲ ಎಂದು ಮೇಧಾ ಪಾಟ್ಕರ್ ನುಡಿದರು.

ಜೈಲು ವೇದಿಕೆ

ಸಂವಿಧಾನದ ಆಶಯಗಳನ್ನು ಈಡೇರಿಸದ ಸರಕಾರಗಳ ಕ್ರಮವನ್ನು ಪ್ರಶ್ನಿಸಿದರೆ ನಗರ ನಕ್ಸಲ್ ಎಂಬ ಪಟ್ಟ ಕಟ್ಟಿ ಜೈಲಿಗೆ ದೂಡಲಾಗುತ್ತಿದೆ. ಆದರೆ, ಜೈಲುಗಳು ಸಹಾ ವೇದಿಕೆಯಾಗುತ್ತಿದ್ದು, ಹೋರಾಟವನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಾಧ್ಯವಾಗುತ್ತಿದೆ.

-ಮೇಧಾ ಪಾಟ್ಕರ್, ಸಾಮಾಜಿಕ ಹೋರಾಟಗಾರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News