ಕ್ರಿಮಿನಲ್‌ಗಳ ಕೈಯಲ್ಲಿ ದೇಶ

Update: 2018-11-24 04:03 GMT

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಪಾಸಿಕ್ಯೂಶನ್ ಸಾಕ್ಷಿಯಾಗಿದ್ದ ಅಝಂ ಖಾನ್ ಇತ್ತೀಚೆಗೆ ಸಿಬಿಐ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯು, ಹರೇನ್ ಪಾಂಡ್ಯಾ ಹತ್ಯೆಯ ಹಿಂದೆ ಗುಜರಾತ್‌ನ ಪೊಲೀಸ್ ಇಲಾಖೆಯ ಕೈವಾಡವನ್ನು ಬಹಿರಂಗಗೊಳಿಸಿತ್ತು. ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ವಂಝಾರ ನಿರ್ದೇಶನದ ಮೇರೆಗೆ ಪಾಂಡ್ಯಾ ಹತ್ಯೆ ನಡೆದಿದೆಯೆನ್ನುವುದು ಈತನ ಹೇಳಿಕೆಯ ಸಾರಾಂಶ. ಪಾಂಡ್ಯಾ ಹತ್ಯೆಯ ಹಿಂದಿರುವ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿವರ ಹೊರ ಬೀಳಬಹುದು ಎನ್ನುವ ಭಯದಿಂದ ಸೊಹ್ರಾಬುದ್ದೀನ್, ಮತ್ತು ಆತನ ಪತ್ನಿಯನ್ನು ಕೊಂದು ಹಾಕಲಾಗಿತ್ತು. ಗುಜರಾತ್ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಸರಕಾರದ ಪಾತ್ರವನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಬಹುದು ಎನ್ನುವ ಭಯವೇ ಪಾಂಡ್ಯ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಇದೀಗ ಅದಕ್ಕೆ ಪೂರಕವಾಗಿ ಇನ್ನೆರಡು ಮಹತ್ವದ ಸಾಕ್ಷಗಳು ಹೊರ ಬಿದ್ದಿವೆ. ಒಂದು, ನಿಗೂಢವಾಗಿ ಮೃತಪಟ್ಟಿರುವ ನ್ಯಾ. ಲೋಯಾ ಹೃದಯಾಘಾತದಿಂದ ಮೃತಪಟ್ಟಿಲ್ಲ, ಅವರಿಗೆ ವಿಷಪ್ರಾಶನವಾಗಿದೆ ಎಂಬ ನ್ಯಾಯಾವಾದಿ ಸತೀಶ್ ಉಕೆ ಆರೋಪ. ಇನ್ನೊಂದು, ಮುಖ್ಯ ತನಿಖಾಧಿಕಾರಿ ಸಂದೀಪ್ ತಾಮ್ಗಡೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿರುವ ಹೇಳಿಕೆ. ಬಿಜೆಪಿಯ ನಾಯಕ ಅಮಿತ್ ಶಾ ಹಾಗೂ ಗುಜರಾತ್‌ನ ಮೂವರು ಹಿರಿಯ ಅಧಿಕಾರಿಗಳು ಸೊಹ್ರಾಬುದ್ದೀನ್‌ನ ಸಹಚರ ತುಳಸಿರಾಮ್ ಪ್ರಜಾಪತಿಯ ಹತ್ಯೆಯ ಹಿಂದಿದ್ದಾರೆ ಎಂದು ತಾಮ್ಗಡೆ ಹೇಳಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಈ ಎಲ್ಲ ಕೃತ್ಯಗಳು ನಡೆದಿರುವ ಸಂದರ್ಭದಲ್ಲಿ ಗುಜರಾತ್‌ನ ಗೃಹ ಸಚಿವರಾಗಿ ಅಮಿತ್ ಶಾ ಕಾರ್ಯನಿರ್ವಹಿಸುತ್ತಿದ್ದರು. ಇಂದು ಅವರೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಆಪ್ತರಾಗಿದ್ದಾರೆ. ಸೊಹ್ರಾಬುದ್ದೀನ್ ತನಿಖೆಯಿಂದ ಸರಕಾರ, ಪೊಲೀಸ್ ಇಲಾಖೆ ಮತ್ತು ಕ್ರಿಮಿನಲ್‌ಗಳ ನಡುವಿನ ಸಂಬಂಧ ಗುಜರಾತನ್ನು ಹೇಗೆ ನಿಯಂತ್ರಿಸುತ್ತಿತ್ತು ಎನ್ನುವುದು ಹೊರಬಿದ್ದಿದೆ. ಗೃಹ ಸಚಿವ ತನ್ನ ಸ್ಥಾನದ ಲಾಭವನ್ನು ಪಡೆದು ಪೊಲೀಸರನ್ನು ನಿಯಂತ್ರಿಸುತ್ತಿದ್ದರು. ಪೊಲೀಸರು ಕ್ರಿಮಿನಲ್‌ಗಳನ್ನು ಬಳಸಿಕೊಂಡು ರಾಜಕಾರಣಿಗಳ ಉದ್ದೇಶಗಳನ್ನು ಈಡೇರಿಸುತ್ತಿದ್ದರು. ಅದಕ್ಕೆ ಬೇಕಾದ ಕಪ್ಪಗಳನ್ನೂ ಪಡೆದುಕೊಳ್ಳುತ್ತಿದ್ದರು. ಬಳಿಕ ಪೊಲೀಸರು ಎನ್‌ಕೌಂಟರ್ ನಡೆಸಿ ಆ ಕ್ರಿಮಿನಲ್‌ಗಳನ್ನು ಕೊಂದು ಸಾಕ್ಷವನ್ನು ನಾಶ ಮಾಡುತ್ತಿದ್ದರು. ವಂಝಾರನಂತಹ ಪೊಲೀಸ್ ಅಧಿಕಾರಿಗಳ ಎನ್‌ಕೌಂಟರ್ ಸಾಹಸಗಳನ್ನು ಮಾಧ್ಯಮಗಳು ಹಾಡಿ ಹೊಗಳಿ ಬರೆಯುತ್ತಿದ್ದವು. ಆದರೆ ಇವರು ಕ್ರಿಮಿನಲ್‌ಗಳನ್ನು ಬಗ್ಗು ಬಡಿಯುವುದಕ್ಕಾಗಿ, ನಾಡನ್ನು ರಕ್ಷಿಸುವುದಕ್ಕಾಗಿ ಎನ್‌ಕೌಂಟರ್ ಮಾಡಿಲ್ಲ. ತಮ್ಮ ಕುಕೃತ್ಯಗಳನ್ನು ಬಚ್ಚಿಡುವುದಕ್ಕಾಗಿ ಎನ್‌ಕೌಂಟರ್‌ಗಳನ್ನು ನಡೆಸಿದ್ದಾರೆ. ಕೊಲೆಗಳನ್ನು ನಡೆಸಿದ ಕ್ರಿಮಿನಲ್‌ಗಳೇನಾದರೂ ಬಾಯಿ ತೆರೆದರೆ ಈ ರಾಜಕಾರಣಿಗಳ ಬಣ್ಣ ಬಯಲಾಗಿ ಬಿಡುತ್ತದೆ. ಪೊಲೀಸ್ ಅಧಿಕಾರಿಗಳು ತಮ್ಮ ಹುದ್ದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸರಕಾರವೇ ಬೀಳಬಹುದು. ಈ ಎಲ್ಲ ಕಾರಣಕ್ಕಾಗಿ ಎನ್‌ಕೌಂಟರ್ ಹೆಸರಿನಲ್ಲಿ ಸೊಹ್ರಾಬುದ್ದೀನ್, ಆತನ ಪತ್ನಿ ಮತ್ತು ಸಹಚರನನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಇನ್ನೂ ಹಲವು ಇಂತಹ ಕೊಲೆಗಳು ನಡೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಸೊಹ್ರಾಬುದ್ದೀನ್, ಪ್ರಜಾಪತಿ, ಅಝಂಖಾನ್ ಮೊದಲಾದವರೆಲ್ಲ ಗೂಂಡಾಗಳು, ಕ್ರಿಮಿನಲ್‌ಗಳು ಆಗಿರಬಹುದು. ಆದರೆ ಇವರನ್ನು ಸಾಕುತ್ತಿದ್ದವರು ಯಾರು ಮತ್ತು ಈ ಕ್ರಿಮಿನಲ್‌ಗಳು ಯಾರಿಗಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವುದರ ಇತಿಹಾಸವನ್ನು ಅಗೆಯುತ್ತಾ ಹೋದಂತೆ, ನಿಜವಾದ ಪಾತಕಿಗಳು ಯಾರಾಗಿದ್ದರು ಎನ್ನುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಒಂದು ಕಾಲದಲ್ಲಿ ನೆಹರೂ, ಲಾಲ್‌ಬಹಾದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರ ಮೂಲಕ ಭಾರತ ಗುರುತಿಸುತ್ತಿತ್ತು. ಕೆಲವು ವಿವಾದಗಳನ್ನು ಮೈಮೇಲೆ ಧರಿಸಿಕೊಂಡಿದ್ದರೂ ಅಟಲ್ ಬಿಹಾರಿ ವಾಜಪೇಯಿಯನ್ನೂ ಇಷ್ಟ ಪಡುವುದಕ್ಕೆ ಈ ದೇಶದ ಜನರಿಗೆ ಕಾರಣಗಳಿವೆ. ಇವರ ಮೂಲಕ ದೇಶ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಪಡೆದುಕೊಂಡಿತ್ತು. ಇವರ ಬದುಕಿನ ಹಿನ್ನೆಲೆ, ಸ್ವಾತಂತ್ರ ಹೋರಾಟ, ರಾಜಕೀಯ ಮುತ್ಸದ್ದಿತನ, ಅಗಾಧ ಓದು ಇವೆಲ್ಲವೂ ಈ ದೇಶದ ಜನರಿಗೆ ಇವರನ್ನು ಇಷ್ಟ ಪಡುವಂತೆ ಮಾಡಿತ್ತು. ಅಂತೆಯೇ ಈ ನಾಯಕರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಅವರನ್ನು ಸಜ್ಜನ ನಾಗರಿಕರನ್ನಾಗಿ ನಮ್ಮ ಶಾಲೆಗಳು ಬೆಳೆಸುತ್ತವೆ. ಆದರೆ ಇಂದು ಈ ದೇಶವನ್ನು ಆಳುತ್ತಿರುವವರ ಯಾವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು? ‘ಯಥಾ ರಾಜಾ ತಥಾ ಪ್ರಜಾ’ ಎನ್ನುವ ಗಾದೆಯಿದೆ. ಈ ದೇಶದ ಬೀದಿಗಳಲ್ಲಿ ಗೂಂಡಾಗಳು, ರೌಡಿಗಳು, ಪಾತಕಿಗಳು ಸಂಸ್ಕೃತಿ ರಕ್ಷಕರ, ಗೋರಕ್ಷಕರ ವೇಷದಲ್ಲಿ ಯಾಕೆೆ ಮೆರೆಯುತ್ತಿದ್ದಾರೆ ಎನ್ನುವುದಕ್ಕೆ ಉತ್ತರ ನಮ್ಮಲ್ಲೇ ಇದೆ. ಚಾರಿತ್ರ ಹೀನರಾದ ನಾಯಕರು ಈ ದೇಶವನ್ನು ಆಳುವಾಗ ಸಹಜವಾಗಿಯೇ ಚಾರಿತ್ರ ಹೀನರೇ ಸಮಾಜದ ಮುಂಚೂಣಿಯಲ್ಲಿರುತ್ತಾರೆ. ಕ್ರಿಮಿನಲ್‌ಗಳ ಮೂಲಕವೇ ರಾಜಕೀಯ ನಡೆಸಿ ಅತ್ಯಂತ ಉನ್ನತ ಹುದ್ದೆಯನ್ನೇರಿದವರಿಗೆ ಕ್ರಿಮಿನಲ್‌ಗಳ ಮೇಲೆ ಸಹಜವಾಗಿಯೇ ಋಣಭಾರಗಳಿರುತ್ತದೆ. ಈ ದೇಶದ ಶ್ರೀಸಾಮಾನ್ಯರ ಹಿತಾಸಕ್ತಿಗಿಂತ ಕ್ರಿಮಿನಲ್‌ಗಳ ಹಿತಾಸಕ್ತಿ ಅವರಿಗೆ ಮುಖ್ಯವಾಗುತ್ತದೆ.

ದೇಶದ ಆರ್ಥಿಕ, ಸಾಮಾಜಿಕ ಮುನ್ನೋಟದ ಬಗ್ಗೆ ಯಾವ ಕಲ್ಪನೆಗಳೂ ಇಲ್ಲದ ನಾಯಕರು, ಈ ದೇಶ ಆರ್ಥಿಕವಾಗಿ ಪತನ ಕಾಣುತ್ತಿರುವ ಸಂದರ್ಭದಲ್ಲಿ ಮತ್ತೆ ಕೋಮುಗಲಭೆಗಳನ್ನು ನಡೆಸಲು ಉತ್ಸಾಹಿತರಾಗುವುದರಲ್ಲಿ ಅಚ್ಚರಿಯೇನಿದೆ. ಆದುದರಿಂದಲೇ ಹರೇನ್ ಪಾಂಡ್ಯಾರನಂತಹ ಹಿಂದೂ ನಾಯಕರ ಕೊಲೆಯ ಹಿಂದೆ ಅಮಿತ್ ಶಾರಂತಹ ನಾಯಕರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಾಗ ಇಡೀ ದೇಶ ಜಾಗೃತವಾಗಬೇಕಾಗಿದೆ. ಈ ದೇಶವನ್ನು ನಾವು ಯಾರ ಕೈಗೆ ಒಪ್ಪಿಸುತ್ತಿದ್ದೇವೆ ಮತ್ತು ಅದರ ಪರಿಣಾಮಗಳೇನಾಗಬಹುದು ಎನ್ನುವುದ ಎಚ್ಚರವನ್ನು ಹೊಂದಬೇಕಾಗಿದೆ. ನೆಹರೂ, ಶಾಸ್ತ್ರಿ, ಇಂದಿರಾರಂತಹ ನಾಯಕರ ನಡುವೆ ಅಮಿತ್ ಶಾ, ಮೋದಿಯಂತಹ ನಾಯಕರೂ ಸೇರಿಕೊಳ್ಳುವುದು ಈ ದೇಶದ ಪಾಲಿನ ಅತಿ ದೊಡ್ಡ ದುರಂತವಾಗಿದೆ. ಆದುದರಿಂದ, ತನ್ನ ಕುರಿತಂತೆ ಕೇಳಿ ಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅಮಿತ್ ಶಾ ಸ್ವಯಂ ಬಿಜೆಪಿಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕಾಗಿದೆ ಅಥವಾ ಪ್ರಧಾನಿ ಮೋದಿಯವರು ರಾಜೀನಾಮೆಗೆ ಅವರ ಮೇಲೆ ಒತ್ತಡ ಹೇರಬೇಕು. ಈ ಮೂಲಕ ಬಿಜೆಪಿಯ ಮಾನವನ್ನು ಮಾತ್ರವಲ್ಲ, ದೇಶದ ಮಾನವನ್ನು ಕಾಪಾಡಬೇಕು. ಇಷ್ಟೆಲ್ಲ ನಡೆದೂ ಅಮಿತ್ ಶಾ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದಾದರೆ, ಪೊಲೀಸರು-ಕ್ರಿಮಿನಲ್‌ಗಳು ಮತ್ತು ರಾಜಕಾರಣಿಗಳ ನಡುವಿನ ವ್ಯತ್ಯಾಸಗಳು ಮುಂದಿನ ಸಂಪೂರ್ಣ ಅಳಿದು ಹೋಗುತ್ತದೆ. ಕ್ರಿಮಿನಲ್‌ಗಳು ಬಹಿರಂಗವಾಗಿಯೇ ಈ ದೇಶವನ್ನು ಆಳತೊಡಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News