ಬಿಜೆಪಿ ಶಾಸಕನಿಂದ ಲೈಂಗಿಕ ಕಿರುಕುಳ: ಮಹಿಳಾ ಘಟಕದ ನಾಯಕಿಯಿಂದ ದೂರು

Update: 2018-11-24 08:03 GMT

ರಾಂಚಿ, ನ. 24: ಜಾರ್ಖಂಡ್ ಬಿಜೆಪಿಯ ಧನಬಾದ್ ಮಹಿಳಾ ಘಟಕದ ನಾಯಕಿಯೊಬ್ಬರು ಬಾಘ್ಮಾರ ಶಾಸಕ ಡುಲ್ಲು ಮಹತೋ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ.

ತಾನು ಅ. 31ರಂದು ಪಕ್ಷಕ್ಕೆ ಹಾಗೂ ಪೊಲೀಸರಿಗೆ ದೂರು ನೀಡಿರುವ ಹೊರತಾಗಿಯೂ ಆರೋಪಿ ಶಾಸಕನ ವಿರುದ್ಧ ಕ್ರಮಕೈಗೊಳ್ಳದೇ ಇರುವುದರಿಂದ ನೊಂದು ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಜಾರ್ಖಂಡ್ ಕಾಂಗ್ರೆಸ್  ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಉಸ್ತುವಾರಿ ಮಯೂರ್ ಶೇಖರ್ ಝಾ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದು ಅದರಲ್ಲಿ ಸಂತ್ರಸ್ತೆ ಬಿಕ್ಕಳಿಸಿ ಅಳುತ್ತಿರುವುದು ಕಾಣಿಸುತ್ತದೆಯಲ್ಲದೆ  ಶಾಸಕ ತನ್ನ ಕೆನ್ನೆ ಮತ್ತು ಸೊಂಟವನ್ನು ಮುಟ್ಟಿದ್ದಾಗಿ ಹಾಗೂ ಅವರ ಕಚೇರಿಯಲ್ಲಿ ತನಗೆ ಕಿರುಕುಳ ನೀಡಿದ್ದಾಗಿ ಆಕೆ ದೂರಿದ್ದಾರೆ.

"ಇದು ನನ್ನ ಮೊದಲ ಎಚ್ಚರಿಕೆ ನನಗೆ ನ್ಯಾಯ ದೊರಕಿಸಿ. ಇಲ್ಲದೇ ಇದ್ದರೆ ನಾನು ಸಿಎಂ ಕಚೇರಿಗೆ ಹೋಗುತ್ತೇನೆ,. ಮೂರನೇ ಎಚ್ಚರಿಕೆಯ ಭಾಗವಾಗಿ ಪ್ರಧಾನಿ ಮೋದಿಯ ಮುಂದೆ ಹೋಗುತ್ತೇನೆ,'' ಎಂದು ಸಂತ್ರಸ್ತೆ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಝಾ ಇದನ್ನು ಜಾರ್ಖಂಡ್ ಬಿಜೆಪಿಯ #ಮೀಟೂ ಮೂಮೆಂಟ್ ಎಂದಿದ್ದಾರೆ. ''ಆರೋಪಿ ಶಾಸಕ ರಾಜ್ಯದ ಸಿಎಂರಿಗೆ  ಹತ್ತಿರದವರು. ಇದೀಗ ಇಡೀ ರಾಜ್ಯದ ಆಡಳಿತ ಆಕೆಯ ಸದ್ದಡಗಿಸಲು ಹೊರಟಿದೆ'' ಎಂದು ಝಾ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಆರೋಪಿ ಶಾಸಕ ಮಾತ್ರ ತನ್ನ ವಿರುದ್ಧದ ಆಪಾದನೆಗಳನ್ನು ನಿರಾಕರಿಸಿ ಇದು ತನ್ನ ವಿರುದ್ಧದ ಸಂಚು ಎಂದು ಹೇಳಿದ್ದಾರೆ. ಸಂತ್ರಸ್ತೆ ಮತ್ತಾಕೆಯ ಪತಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News