ಕೇರಳ ನೆರೆಗೆ ಹವಾಮಾನ ಬದಲಾವಣೆ ಕಾರಣ: ಹವಾಮಾನ ಇಲಾಖೆಯ ಮಹಾ ನಿರ್ದೇಶಕ

Update: 2018-11-24 15:44 GMT

ಹೊಸದಿಲ್ಲಿ, ನ.24: ಭಾರತದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗಿದ್ದ ಪ್ರತಿಕೂಲ ಹವಾಮಾನ ಘಟನೆಗಳ ಸರಣಿ ಕಳೆದ ಆಗಸ್ಟ್‌ನಲ್ಲಿ ಕೇರಳದಲ್ಲಿ ಸಂಭವಿಸಿದ್ದ ವಿನಾಶಕಾರಿ ನೆರೆಗೆ ಕಾರಣವಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಕೆ.ಜೆ.ರಮೇಶ್ ಅವರು ತಿಳಿಸಿದ್ದಾರೆ.

ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ವಿಶೇಷ ಸಂದರ್ಶನ ನೀಡಿದ ಅವರು,ಪ್ರತಿಕೂಲ ಹವಾಮಾನ ಘಟನೆಗಳಲ್ಲಿ ಮಹತ್ವದ ಬಲಾವಣೆಗಳಿಗೆ ಸಾಕ್ಷವನ್ನು ದೇಶವು ನೋಡಿದೆ ಮತ್ತು ಈ ಬದಲಾವಣೆಗಳಿಂದಾಗಿಯೇ ಕೇರಳದಲ್ಲಿ ನೆರೆಯುಂಟಾಗಿತ್ತು. ಮಳೆಯೂ ಅತಿಯಾಗಿ ಸುರಿದಿತ್ತು ಎಂದು ಹೇಳಿದರು.

ಜುಲೈ ಅಂತ್ಯದಲ್ಲ್ಲಿ ಕೇರಳದ ಮುಖ್ಯ ಜಲಾಶಯಗಳಲ್ಲಿ ನೀರಿನ ಮಟ್ಟವು ಹೆಚ್ಚಾಗಿದ್ದ ಸಂದರ್ಭದಲ್ಲಿಯೇ ಅತಿಯಾಗಿ ಮಳೆ ಸುರಿದಿತ್ತು. ಇದರಿಂದಾಗಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದು ಆಡಳಿತಕ್ಕೆ ಅನಿವಾರ್ಯವಾಗಿತ್ತು. ಕೇರಳದ ಭೂಪ್ರದೇಶವು ಗುಡ್ಡಗಳು ಮತ್ತು ಇಳುಕಲುಗಳಿಂದ ಕೂಡಿರುವದರಿಂದ ಜಲಾಶಯಗಳಿಂದ ಬಿಡುಗಡೆಗೊಂಡ ನೀರು ರಭಸದಿಂದ ತಗ್ಗು ಪ್ರದೇಶಗಳತ್ತ ನುಗ್ಗಿತ್ತು ಮತ್ತು ದಿಢೀರ್ ನೆರೆಯುಂಟಾಗಿ ಹಲವಾರು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.

ವಿಶ್ವಾದ್ಯಂತ ಚಂಡಮಾರುತಗಳ ಆವರ್ತನೆಯಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ ಎಂದೂ ಹೇಳಿದ ರಮೇಶ್,ಭಾರತವು ಕೇರಳ ನೆರೆಯಿಂದ ಕಲಿತಿರುವ ಪಾಠಗಳು ಮತ್ತು ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಭಾರೀ ಮಳೆಯಿಂದಾಗಿ ನದಿಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯನ್ನು ಅಧ್ಯಯನ ಮಾಡಲು ನೂತನ ತಂತ್ರಜ್ಞಾನವೊಂದನ್ನು ಅಭಿವೃದ್ಧಿಗೊಳಿಸಲಾಗಿದೆ ಮತ್ತು ಇದು ಮಳೆಯ ಪರಿಣಾಮದ ಮೇಲೆ ಪರಿಣಾಮಕಾರಿ ನಿಗಾ ಇರಿಸಲು ರಾಜ್ಯ ಸರಕಾರಗಳಿಗೆ ನೆರವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News