ಸಂಸ್ಕೃತವನ್ನು ಬೆಳೆಸಿದವರು ಅವೈದಿಕರು: ಎಚ್.ಎಸ್.ವೆಂಕಟೇಶಮೂರ್ತಿ

Update: 2018-11-24 16:34 GMT

ಬೆಂಗಳೂರ, ನ.24: ರಾಜ್ಯದಲ್ಲಿ ಸಂಸ್ಕೃತ ಭಾಷೆ ವೈದಿಕರ ಸ್ವತ್ತು ಎಂಬ ಅಪಕಲ್ಪನೆಯಿದೆ. ಆದರೆ, ಸಂಸ್ಕೃತವನ್ನು ಕಟ್ಟಿ ಬೆಳೆಸಿದವರು ಶೂದ್ರರು ಎಂಬ ಸತ್ಯವನ್ನು ಅರಿಯಬೇಕಿದೆ ಎಂದು ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ಶನಿವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತಿಂಗಳ ಕಾರ್ಯಕ್ರಮದಡಿ ಆಯೋಜಿಸಿದ್ದ ‘ಸಂಸ್ಕೃತ ಅನುವಾದಗಳು-ಸ್ವಾನುಭವದ ಹಿನ್ನೆಲೆ’ಯಲ್ಲಿ ವಿಷಯದ ಕುರಿತು ಅವರು ಮಾತನಾಡಿದರು.

ದೇಶದ ಮೂಲ ಸಂಸ್ಕೃತಿಯ ಭಾಗವಾದ ಉಪನಿಷತ್‌ಗಳನ್ನು ರಚಿಸಿದ ಋಷಿಮುನಿಗಳಲ್ಲಿ ಶೇ.80ರಷ್ಟು ಅವೈದಿಕರು. ಅದರಲ್ಲಿ 15ಮಂದಿ ಋಷಿಕೇತಿಯರು. ಅವರಲ್ಲಿ ಜಾತಿ, ಧರ್ಮದಂತಹ ಯಾವುದೆ ಭೇದ ಭಾವ ಇರಲಿಲ್ಲ. ಆದರೆ, ಈಗ ಆ ಉಪನಿಷತ್‌ಗಳನ್ನು ಅಭ್ಯಸಿಸುವ ಸಂದರ್ಭದಲ್ಲಿ ಧರ್ಮ, ಜಾತಿಗಳು ಅಡ್ಡ ಬರುತ್ತಿವೆ ಎಂದು ವಿಷಾದಿಸಿದರು.

ನಾನು ಅತ್ಯಂತ ಆಸಕ್ತಿಯಿಂದ ‘ಋಗ್ವೇದ ಸ್ಮರಣೆ ’ಎಂಬ ಕೃತಿಯನ್ನು ರಚಿಸಿದೆ. ಋಗ್ವೇದದಲ್ಲಿ ಈ ಕಾಲಕ್ಕೆ ಅಗತ್ಯವಾದ ಸಾಮಾಜಿಕ ಚಿಂತನೆ, ಹೆಣ್ಣು ಮಕ್ಕಳ, ವಿಧವೆಯರ ಕುರಿತು, ಹಣಕಾಸು, ಆಸ್ತಿಗೆ ಸಂಬಂಧಿಸಿದಂತೆ ಯಾವ ರೀತಿಯ ಚಿಂತನೆಗಳು ಇದ್ದವು ಎಂಬುದನ್ನು ಅಭ್ಯಾಸ ಮಾಡಿ ಬರೆದಿದ್ದೆ. ಆದರೆ, ಕನ್ನಡ ಸಾಹಿತ್ಯದ ವಿಮರ್ಶಾ ಜಗತ್ತು ಕೃತಿಯ ಕುರಿತು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ ಹಾಗೂ ಪು.ತಿ.ನರಸಿಂಹಚಾರ್‌ರವರು ಸಂಸ್ಕೃತದಿಂದ ಪ್ರಭಾವಿತರಾಗಿದ್ದರು. ಶೂದ್ರ ವರ್ಗದಿಂದ ಬಂದ ಕುವೆಂಪು ಸಂಸ್ಕೃತವನ್ನು ಸವಾಲಾಗಿ ಸ್ವೀಕರಿಸಿ ಕಲಿತುಕೊಂಡರು. ಹಾಗೂ ತಮ್ಮ ಕಾವ್ಯಗಳಲ್ಲಿ ಸಂಸ್ಕೃತ, ಹಳಗನ್ನಡ ಹಾಗೂ ಹೊಸ ಕನ್ನಡವನ್ನು ಹದವಾಗಿ ಬೆರಸಿ ಲಯ ತಂದು ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಗ್ರಾಮೀಣ ಸೊಗಡಿನ ಕವಿ ದ.ರಾ.ಬೇಂದ್ರೆಗೆ ಬಾಲ್ಯದಿಂದ ಸಂಸ್ಕೃತವನ್ನು ಆಳವಾಗಿ ಅಭ್ಯಾಸ ಮಾಡಿದ್ದರೂ ತಮ್ಮ ಕಾವ್ಯಗಳಲ್ಲಿ ಸಂಸ್ಕೃತವನ್ನು ಬೆರಸಲಿಲ್ಲ. ಉತ್ತರ ಕರ್ನಾಟಕದ ಭಾಗದ ಗ್ರಾಮೀಣ ಭಾಷೆಯನ್ನು ಜಾನಪದ ಶೈಲಿಯಲ್ಲಿ ಬರೆದರು. ಆದರೆ, ಪು.ತಿ.ನರಸಿಂಹಚಾರ್ ಸಂಸ್ಕೃತವನ್ನು ಧ್ಯಾನಿಸಿದರು. ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಇನ್ನು ಸಾಕಷ್ಟು ಬರವುದಿದೆ ಎಂದು ಭಾವಿಸಿದ್ದರು ಎಂದು ಅವರು ವಿಶ್ಲೇಷಿಸಿದರು. ಈ ವೇಳೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳ ಸಿದ್ದಪ್ಪ ಉಪಸ್ಥಿತರಿದ್ದರು.

ಕವಿತೆ ಕಟ್ಟಲು ಸಂಸ್ಕೃತ ಬೇಕು

ಸಂಸ್ಕೃತ ಹಾಗೂ ಹಳಗನ್ನಡ ಸಾಹಿತ್ಯದ, ಭಾಷೆಯ ಪರಿಚಯವಿಲ್ಲದೆ ಹೊಸ ಕವಿತೆಗಳನ್ನು ಸಶಕ್ತವಾಗಿ ಕಟ್ಟಲು ಸಾಧ್ಯವಿಲ್ಲ. ಆದರೆ, ಇಂದಿನ ಯುವ ತಲೆಮಾರು ಸಂಸ್ಕೃತದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಪುನರ್ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಎಚ್.ಎಸ್.ವೆಂಕಟೇಶಮೂರ್ತಿ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News