ವಕ್ಫ್ ಬೋರ್ಡ್‌ಗೆ ಭೂಮಿ ಹಸ್ತಾಂತರ: ಬೆಳ್ಳಳ್ಳಿಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಚಿವ ಝಮೀರ್ ಪರಿಶೀಲನೆ

Update: 2018-11-24 16:56 GMT

ಬೆಂಗಳೂರು, ನ.24: ಹೆಗಡೆ ಸಮೀಪದ ಬೆಳ್ಳಳ್ಳಿಯಲ್ಲಿ ಹಝ್ರತ್ ಸೋತೆ ಶಾ-ಮಾಣಿಕ್ ಷಾ ದರ್ಗಾಗೆ ಸೇರಿದ ಖಾಲಿಯಿರುವ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಅವರೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ಪರಿಶೀಲನೆ ನಡೆಸಿದರು.

ಸರ್ವೆ ನಂ.55ರಲ್ಲಿರುವ 602 ಎಕರೆ ಭೂಮಿಯನ್ನು ಟಿಪ್ಪುಸುಲ್ತಾನ್ ಹಝ್ರತ್ ಸೋತೆ ಶಾ-ಮಾಣಿಕ್ ಶಾ ದರ್ಗಾಗೆ ಬಳುವಳಿಯಾಗಿ ನೀಡಿದ್ದರು. ನಂತರ ಮೈಸೂರು ಮಹಾರಾಜರು ಈ ಭೂಮಿಯನ್ನು ದರ್ಗಾ ಹೆಸರಿನಲ್ಲೆ ಮುಂದುವರೆಸಿದ್ದರು ಎಂಬುದನ್ನು ಜಿಲ್ಲಾಧಿಕಾರಿಗೆ ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಇನಾಮತಿ ರದ್ಧತಿ ಕಾಯ್ದೆ ಬಂದ ಬಳಿಕ ಸರಕಾರ ಈ ಭೂಮಿಯನ್ನು ಹಿಂಪಡೆದುಕೊಂಡು, ವಿವಿಧ ಯೋಜನೆಗಳಿಗಾಗಿ ಬಳಕೆ ಮಾಡಿಕೊಂಡಿತ್ತು. ಈಗ 602 ಎಕರೆಯಲ್ಲಿ ಕೇವಲ 85 ಎಕರೆ ಮಾತ್ರ ಖಾಲಿಯಿದೆ. ಕಳೆದ ಸಾಲಿನ ಡಿಸೆಂಬರ್‌ನಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಮುಂದೆ ಭೂಮಿಯ ಪ್ರಕರಣ ಬಂದಾಗ, ಖಾಲಿ ಜಾಗವನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು ಎಂದು ಅವರು ಹೇಳಿದರು.

ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಆದರೆ, ಖಾಲಿಯಿರುವ ಜಾಗವನ್ನು ವಕ್ಫ್‌ಬೋರ್ಡ್‌ಗೆ ಹಸ್ತಾಂತರ ಮಾಡಿಕೊಡಿ ಎಂದು ಸ್ಥಳ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿಗೆ ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಜಯಶಂಕರ್, 15 ದಿನಗಳಲ್ಲಿ ಸಮೀಕ್ಷೆ ಮಾಡಿ, ಖಾಲಿ ಜಾಗದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಈ ಹಿಂದೆ ಕಂದಾಯ ಸಚಿವರು ಜಿಲ್ಲಾಧಿಕಾರಿಗೆ, ಸಮೀಕ್ಷೆ ನಡೆಸಿ, ಖಾಲಿ ಜಾಗವನ್ನು ವಕ್ಫ್‌ಬೋರ್ಡ್‌ಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿರುವ ವಿಚಾರವನ್ನು ಸಚಿವ ಝಮೀರ್‌ ಅಹ್ಮದ್‌ ಖಾನ್ ನನ್ನ ಗಮನಕ್ಕೆ ತಂದಿದ್ದಾರೆ. ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನಸೀರ್‌ ಅಹ್ಮದ್, ರಿಝ್ವನ್ ಅರ್ಶದ್, ಶಾಸಕ ಎನ್.ಎ.ಹಾರೀಸ್, ಹಝ್ರತ್ ಸೋತೆ ಶಾ-ಮಾಣಿಕ್ ಶಾ ದರ್ಗಾ ಸಮಿತಿ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News