ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ: ಪ್ರೊ.ಚಂಪಾ

Update: 2018-11-24 17:00 GMT

ಬೆಂಗಳೂರು, ನ.24: ಆಧುನಿಕ ಜಗತ್ತಿನಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಆಯೋಜಿಸಿದ್ದ ವಿವಿಧ ಲೇಖಕರ 37 ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರವೇಶಿಸಿದ ಬಳಿಕ ಹೊರಗಡೆ ಬರಲು ಹಲವು ದಿನಗಳೇ ಬೇಕಾಗುತ್ತದೆ. ಅಥವಾ ಸಾಯುವವರೆಗೂ ಅದರಿಂದ ಹೊರಗಡೆ ಬರಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪ್ರಮುಖ ಪುಸ್ತಕ ಪ್ರಕಾಶನವಾದ ನವಕರ್ನಾಟಕದಲ್ಲಿ ಪ್ರಗತಿಪರ, ಸೈದ್ಧಾಂತಿಕ ನಿಲುವುಗಳು ಹಾಗೂ ಎಡಪಂಥೀಯ ವಿಚಾರಗಳಿಗೆ ಹೋಲುವಂತಹ ಪುಸ್ತಕಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ಸಪ್ನ ಪ್ರಕಾಶನವು ಯಾವುದೇ ಮಡಿವಂತಿಕೆ ಇಲ್ಲದೆ ಸಾಹಿತ್ಯ, ಸಾಂಸ್ಕೃತಿಕ, ಹಾಸ್ಯ, ರಾಜಕೀಯ, ವಿಮರ್ಶೆ ಸೇರಿದಂತೆ ಎಲ್ಲ ರೀತಿಯ ಪುಸ್ತಕಗಳನ್ನು ಹಾಗೂ ಸ್ಪರ್ಧಾ ಜಗತ್ತಿಗೆ ಅಗತ್ಯವಾದ ಎಲ್ಲ ಪುಸ್ತಕಗಳಿಗೂ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿನ ಹಲವು ಬರಹಗಾರರು ಒಂದೇ ರೀತಿಯ ಸಾಹಿತ್ಯಕ್ಕೆ ಸೀಮಿತಗೊಳ್ಳದೆ ವಿವಿಧ ಪ್ರಕಾರಗಳಿಗೂ ವಿಸ್ತಾರಗೊಳ್ಳುತ್ತಿರುವುದು ಸ್ವಾಗತಾರ್ಹ. ಪತ್ರಿಕೆಗಳಲ್ಲಿ ಅಂಕಣ ಬರೆಯುವುದು, ಕವಿತೆ, ಆಧುನಿಕ ವಚನ ಸೇರಿದಂತೆ ಹಲವು ರೀತಿಯಲ್ಲಿ ಕನ್ನಡ ಸಾಹಿತ್ಯವನ್ನು ವಿಸ್ತರಿಸುತ್ತಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿಯವರ ‘ಭಾರತೀಯತೆ ಲಿಂಗಾಯತ: ಹಿಂದೂ’ ಪುಸ್ತಕ ಹಲವು ಕೃತಿಗಳ ಸಂಚಿತ ಸಂಪುಟವಾಗಿದೆ. ಅವರು, ತಮ್ಮದೇ ಆದ ಸೈದ್ಧಾಂತಿಕ ನಿಲುವುಗಳನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಜತೆಗೆ, ಎ.ಎಸ್.ಅಂಗಡಿಯ ‘ಸರಳ ಕವಿರಾಜ ಮಾರ್ಗ’ ಕೃಷಿಯನ್ನು ಸುಲಭವಾಗಿ, ಸರಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ಇಂದಿನ ಮಕ್ಕಳನ್ನು ಅಂತರ್ಜಾಲ, ಮೊಬೈಲ್‌ಗಳಿಂದ ಸಾಧ್ಯವಾದಷ್ಟು ಬೇರ್ಪಡಿಸಬೇಕು. ಮಕ್ಕಳಲ್ಲಿ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಸಬೇಕು. ಅಲ್ಲದೆ, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಾಹಿತ್ಯವನ್ನು ಹೆಚ್ಚು ಮನವರಿಕೆ ಮಾಡಿಕೊಡಬೇಕು ಹಾಗೂ ಅದರ ಕಡೆಗೆ ಆಕರ್ಷಿತರಾಗುವಂತೆ ಮಾಡಬೇಕು ಎಂದು ನುಡಿದರು.

ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಮಾಗಮ ಇಲ್ಲಿದೆ. ಬರೆಯುವ ಹವ್ಯಾಸ ಕೆಟ್ಟದು. ಒಂದುಸಾರಿ ಅಂಟಿಕೊಂಡರೆ ಅದು ನಮ್ಮನ್ನು ಬಿಡುವುದಿಲ್ಲ. ನಾನು ವಿಜ್ಞಾನದ ವಿದ್ಯಾರ್ಥಿಯಾದರೂ ನಮ್ಮ ಗುರುಗಳು ಕನ್ನಡದ ಹುಚ್ಚಿಡಿಸಿದರು. ಇಂದು ಹೆಚ್ಚು ಪುಸ್ತಕ ಬರುತ್ತಿದೆ. ಇಂದು ಬರುವಷ್ಟು ಪುಸ್ತಕಗಳು ಹಿಂದೆ ಬರುತ್ತಿರಲಿಲ್ಲ. ಆದರೆ ಓದಿಸಿಕೊಳ್ಳುವ ಶಕ್ತಿ ಪುಸ್ತಕಕ್ಕಿರಬೇಕು ಎಂದರು.

ಕವಿ ಎಷ್ಟು ದೊಡ್ಡವನೋ ಅಷ್ಟೇ ಪುಸ್ತಕ ಪ್ರಕಾಶಕನು ದೊಡ್ಡವನು. ಪುಸ್ತಕವನ್ನು ಪ್ರಕಾಶನ ಮಾಡಿ ಜನರಿಗೆ ತಲುಪಿಸುವ ಕೆಲಸ ದೊಡ್ಡದು. ಕನ್ನಡದಿಂದ ದೂರ ಇರುವವರಿಗೆ ಪ್ರೀತಿ ಹೆಚ್ಚು. ಯಾವುದೇ ವಸ್ತುವಿನ ದರ್ಶನ ಸಿಗಬೇಕಾದರೆ ಅಂತರ ಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕವಿ ಚಿದಾನಂದ ಮೂರ್ತಿ, ನಿತಿನ್ ಷಾ ದಂಪತಿ, ಸಾಹಿತಿಗಳಾದ ಕಮಲಾ ಹಂಪನ, ಡಾ.ದೊಡ್ಡರಂಗೇಗೌಡ, ಡಾ.ಕೆ.ಮರುಳಸಿದ್ದಪ್ಪ, ಎಸ್.ಎಸ್ ವೆಂಕಟೇಶಮೂರ್ತಿ ಹಾಗೂ ಹಲವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ಹಂಪ ನಾಗರಾಜಯ್ಯ, ಕವಿ ಸಿದ್ದಲಿಂಗಯ್ಯ, ಸಿ.ಎನ್ ರಾಮಚಂದ್ರನ್, ರಾಘವೇಂದ್ರ ಪಾಟೀಲ, ಕುಂ.ವೀರಭದ್ರಪ್ಪಸೇರಿದಂತೆ ಹಲವು ಸಾಹಿತಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News