48 ಗಂಟೆಗಳು... ಮೂರು ಆಘಾತಗಳು...

Update: 2018-11-26 04:09 GMT

ಬರೇ 48 ಗಂಟೆಗಳಲ್ಲಿ ಮೂರು ಆಘಾತಗಳು ಕರ್ನಾಟಕಕ್ಕೆ ಸರಣಿಯಲ್ಲಿ ಅಪ್ಪಳಿಸಿದವು. ಮಂಡ್ಯದಲ್ಲಿ ನಾಲೆಗೆ ಬಸ್ ಉರುಳಿ 30 ಮಂದಿ ಮೃತರಾದ ಸುದ್ದಿ ಬೆಳಕಿಗೆ ಬಂದು ಇನ್ನೂ 12 ಗಂಟೆಯೂ ಆಗಿಲ್ಲ ಅಷ್ಟರಲ್ಲೇ, ಮಂಡ್ಯದ ಗಂಡು ಎಂದೇ ಕರೆಸಿಕೊಂಡಿದ್ದ ನಟ, ರಾಜಕಾರಣಿ ಅಂಬರೀಷ್ ನಿಧನರಾಗಿದ್ದಾರೆ. ಅವರ ಬೆನ್ನಿಗೇ ಹಿರಿಯ ರಾಜಕೀಯ ಮುತ್ಸದ್ದಿ ಜಾಫರ್ ಶರೀಫ್ ಮರೆಯಾದ ಸುದ್ದಿ ಹೊರಬಿದ್ದಿದೆ.

ಮಂಡ್ಯದಲ್ಲಿ ನಡೆದ ಬಸ್ ದುರಂತವಂತೂ ಮನುಷ್ಯನ ಸ್ವಾರ್ಥ, ದುರಾಸೆಯ ಪರಿಣಾಮ. ಅದನ್ನು ಅಪಘಾತ ಎನ್ನುವುದಕ್ಕಿಂತ ಅಪರಾಧ ಎಂದು ಕರೆಯುವುದೇ ಉಚಿತ. ಯಾಕೆಂದರೆ ಗುಜರಿ ಸೇರಬೇಕಾದ ಬಸ್ ಒಂದನ್ನು ಅನಧಿಕೃತವಾಗಿ ಮಾಲಕರು ಓಡಿಸುತ್ತಿದ್ದುದೇ ದುರಂತಕ್ಕೆ ಕಾರಣವಾಗಿತ್ತು. ನಮ್ಮ ವ್ಯವಸ್ಥೆ ಮುಖ್ಯವಾಗಿ ಸಾರಿಗೆ ಇಲಾಖೆಯೊಳಗಿರುವ ಖೂಳರು, ಭ್ರಷ್ಟ ಅಧಿಕಾರಿಗಳು ಸೇರಿ ಆ ಮೂವತ್ತು ಅಮಾಯಕರನ್ನು ಕೊಂದಿದ್ದಾರೆ. ಇದೇ ಸಂದರ್ಭದಲ್ಲಿ ಸಾವಿಗೆ ಬಸ್ ಚಾಲಕ ಮತ್ತು ನಿರ್ವಾಹಕರೂ ಅಷ್ಟೇ ಹೊಣೆಗಾರರಾಗಿದ್ದಾರೆ. ಬಸ್‌ನ ಬ್ರೇಕ್ ಕೆಟ್ಟಿತ್ತು ಎನ್ನುವುದು ಇಬ್ಬರಿಗೂ ಅರಿವಿತ್ತು. ತಿಳಿದೂ ಅಷ್ಟೂ ಪ್ರಯಾಣಿಕರನ್ನು ಆ ಬಸ್‌ನಲ್ಲಿ ಸಾಗಿಸಿರುವುದು ಸಣ್ಣ ಅಪರಾಧವೇನೂ ಅಲ್ಲ.

ಮಂಡ್ಯದ ದುರಂತ ರಾಜ್ಯ ಸರಕಾರದ ಹೊಣೆಗಾರಿಕೆಯನ್ನು ಎತ್ತಿ ತೋರಿಸಿದೆ. ಇಂದು ರಾಜ್ಯದೊಳಗಿರುವ ಆರ್‌ಟಿಒ ಕಚೇರಿಗಳನ್ನು ಶುದ್ಧೀಕರಣಗೊಳಿಸುವ, ಮಧ್ಯವರ್ತಿಗಳಿಂದ ಮುಕ್ತಗೊಳಿಸುವ ಕೆಲಸ ಆರಂಭವಾಗಬೇಕಾಗಿದೆ. ಈ ಹಿಂದೊಮ್ಮೆ ಆರ್‌ಟಿಒ ಕಚೇರಿಗಳಿಗೆ ಸಿಸಿ ಕ್ಯಾಮರಾ ಅಳವಡಿಸುವ ಕುರಿತಂತೆ ಸಾರಿಗೆ ಇಲಾಖೆ ನಿರ್ಧರಿಸಿತ್ತು. ಆದರೆ ಆ ನಿರ್ಧಾರ ಅನುಷ್ಠಾನಕ್ಕೆ ಬರುವಲ್ಲಿ ಮಾತ್ರ ವಿಫಲವಾಗಿದೆ. ಇದಕ್ಕೆ ಕಾರಣ ಏನು ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ನಮ್ಮ ಸಾರಿಗೆ ಇಲಾಖೆ, ಕಚೇರಿಗಳನ್ನು ನಿಯಂತ್ರಿಸುತ್ತಿರುವ ಮಧ್ಯವರ್ತಿಗಳ ಮಾಫಿಯಾದ ಶಕ್ತಿಯನ್ನು ಇದು ಹೇಳುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯದ ಬಸ್ ದುರಂತಕ್ಕೆ ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ. ಆದರೆ ಇಂತಹ ಭಾವನಾತ್ಮಕ ಪ್ರತಿಕ್ರಿಯೆಯಿಂದ ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗುವುದಿಲ್ಲ. ಅವಧಿ ಮುಗಿದ ಬಸ್‌ನ್ನು ಚಲಾಯಿಸಲು ಅನುಮತಿ ನೀಡಿದವರು ಯಾರು ಎನ್ನುವುದನ್ನು ಗುರುತಿಸಿ ಆ ಅಧಿಕಾರಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಜೊತೆಗೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳಿಗೆ ಅಂಕುಶ ತೊಡಿಸುವ ಕೆಲಸವಾಗಬೇಕು. ಅದನ್ನು ಸುತ್ತಿಕೊಂಡಿರುವ ಮಧ್ಯವರ್ತಿಗಳನ್ನು ಇಲ್ಲವಾಗಿಸಬೇಕು. ಈ ಮೂಲಕ ಸಂತ್ರಸ್ತರಿಗೆ ಸರಕಾರ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕು.

ಬಸ್ ದುರಂತದ ಬೆನ್ನಿಗೇ ಇನ್ನೊಂದು ಆಘಾತ ಅಂಬರೀಷ್ ನಿಧನ. ಈ ಹಿಂದೆ ಶಾಸಕರಾಗಿದ್ದಾಗಲೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿ, ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದವರು ಅಂಬರೀಷ್. ಅವರದು ಸಾಯುವ ವಯಸ್ಸಲ್ಲ. ಆದರೆ, ಕುಡಿತ ಅವರನ್ನು ಸಾವಿಗೆ ಇನ್ನಷ್ಟು ಸಮೀಪವಾಗಿಸಿತ್ತು. ಒಬ್ಬ ಕಲಾವಿದನಾಗಿ ಸಾಕಷ್ಟು ಸಾಧಿಸಿದ ಅಂಬರೀಷ್ ಅವರಿಗೆ ರಾಜಕಾರಣಿಯಾಗಿಯೂ ನಾಡಿಗೆ ಹಿರಿದಾದುದನ್ನು ಮಾಡುವ ಅವಕಾಶವಿತ್ತು. ಆದರೆ ಅವರ ಬದುಕಿನ ಶೈಲಿ ಅದಕ್ಕೆ ಅವಕಾಶ ನೀಡಲಿಲ್ಲ. ಸಿನಿಮೋದ್ಯಮದಲ್ಲಿ ಅಂಬರೀಷ್ ಭಿನ್ನ ವ್ಯಕ್ತಿತ್ವವನ್ನು ತನ್ನದಾಗಿಸಿಕೊಂಡಿದ್ದರು. ರಾಜ್‌ಕುಮಾರ್, ವಿಷ್ಣುವರ್ಧನ್ ನಟರಾಗಿ ಮೆರೆಯುತ್ತಿದ್ದ ಕಾಲದಲ್ಲಿ, ತನ್ನದೇ ರೆಬೆಲ್ ಶೈಲಿಯ ಮೂಲಕ ಅಂಬರೀಷ್ ಸ್ಥಾನ ಗಿಟ್ಟಿಸಿಕೊಂಡರು. ಅವರು ನಟಿಸಿದ ‘ಅಂತ’ ಚಿತ್ರ ಕನ್ನಡದ ಜನಪ್ರಿಯ ಚಿತ್ರೋದ್ಯಮಕ್ಕೆ ಹೊಸ ತಿರುವನ್ನು ನೀಡಿತು. ಹಾಗೆಯೇ ರಂಗನಾಯಕಿ, ಪಡುವಾರಳ್ಳಿ ಪಾಂಡವರು, ಏಳು ಸುತ್ತಿನ ಕೋಟೆ ಮೊದಲಾದ ಚಿತ್ರಗಳು ಶ್ರೀಸಾಮಾನ್ಯರ ಮೇಲೆ ಬೀರಿದ ಪರಿಣಾಮ ದೊಡ್ಡದು. ತನ್ನ ಸಜ್ಜನಿಕೆಯ ಮೂಲಕ ಜನರ ನಡುವೆ ‘ಕರ್ಣ’ ಎಂದು ಗುರುತಿಸಿಕೊಂಡವರು. ‘ಸೂಪರ್ ಸ್ಟಾರ್’ ಆಗಿ ಆಕಾಶದಲ್ಲಿ ಮೆರೆಯದೆ ಅಭಿಮಾನಿಗಳ ಕೈಗೆಟಕುವಂತೆ ಬದುಕಿದವರು. ಆ ಕಾರಣದಿಂದಲೇ ಅವರು ರಾಜಕೀಯಕ್ಕೆ ಕಾಲಿಡಲು ಸಾಧ್ಯವಾಯಿತು.

ಸಿನೆಮಾದಲ್ಲಿ ಸಾಧಿಸಿದ್ದನ್ನು ಅಂಬರೀಷ್ ಅವರಿಗೆ ರಾಜಕಾರಣದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಜಾತಿ ರಾಜಕಾರಣವೂ ರಾಜಕೀಯದಲ್ಲಿ ಅವರ ವ್ಯಕ್ತಿತ್ವವನ್ನು ಕುಗ್ಗಿಸಿತು. ಕಾವೇರಿ ವಿಷಯದಲ್ಲಿ ಬೀದಿಗಿಳಿದರಾದರೂ, ಬಳಿಕ ಆ ವಿಷಯದಲ್ಲೂ ಸುಮ್ಮನಾಗಿ ಬಿಟ್ಟರು. ತನ್ನ ಬೆನ್ನ ಹಿಂದಿದ್ದ ಜಾತಿಯನ್ನು ಮುಂದಿಟ್ಟು ಕಾಂಗ್ರೆಸ್‌ನೊಳಗೆ ಬ್ಲಾಕ್‌ಮೇಲ್ ರಾಜಕಾರಣ ಮಾಡತೊಡಗಿದರು. ಒಂದು ರೀತಿಯಲ್ಲಿ ಅಂಬರೀಷ್ ಎಂದರೆ ಕಾಂಗ್ರೆಸ್‌ಗೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪವಾಗಿತ್ತು. ಮಂಡ್ಯವೂ ಸೇರಿದಂತೆ ನಾಡಿನ ರೈತರ ಸಮಸ್ಯೆಯನ್ನು ಆಳುವವರಿಗೆ ತಲುಪಿಸುವ ದೊಡ್ಡ ಅವಕಾಶ ಅಂಬರೀಷ್‌ಗಿತ್ತು. ರೈತರ ಬೇರೆ ಬೇರೆ ಸಮಸ್ಯೆಗಳನ್ನು ಮುಂದಿಟ್ಟು ಬೀದಿಗಿಳಿದಿದ್ದರೆ, ಅವರಿಗೆ ಕರ್ನಾಟಕದ ಎಂಜಿಆರ್ ಆಗುವ ಅವಕಾಶವಿತ್ತು. ತಮ್ಮ ಉಡಾಫೆ, ಅಶಿಸ್ತಿನ ಜೀವನದಿಂದ ಸಿನೆಮಾದಲ್ಲಿ ಸಂಪಾದಿಸಿದ ವ್ಯಕ್ತಿತ್ವವನ್ನು ರಾಜಕೀಯದಲ್ಲಿ ಕಳೆದುಕೊಂಡರು. ರಾಜ್‌ಕುಮಾರ್, ವಿಷ್ಣುವರ್ಧನ್‌ರನ್ನು ಕಳೆದುಕೊಂಡ ಸಿನೆಮಾ ಉದ್ಯಮದಲ್ಲಿ ಅಂಬರೀಷ್‌ಗೆ ಅಪಾರ ಗೌರವವಿತ್ತು. ಈ ಉದ್ಯಮದೊಳಗೆ ಬಿಕ್ಕಟ್ಟು ತಲೆದೋರಿದಾಗ ಇವರು ಸುಪ್ರೀಂಕೋರ್ಟ್‌ನಂತೆ ಕೆಲಸ ಮಾಡಿದವರು. ಒಂದು ರೀತಿಯಲ್ಲಿ ಸಿನೆಮಾ ಉದ್ಯಮ ಹಿರಿಯನನ್ನು ಕಳೆದುಕೊಂಡು ಅನಾಥವಾಗಿದೆ.

ಕನ್ನಡ ನಾಡು ಕಂಡ ಅಪರೂಪದ ರಾಜಕೀಯ ಮುತ್ಸದ್ದಿ ಜಾಫರ್ ಶರೀಫ್. ನಟ ಅಂಬರೀಷ್ ನಿಧನದ ಕೆಲವೇ ಗಂಟೆಗಳಲ್ಲಿ ಅವರು ಇಲ್ಲವಾದ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸತೊಡಗಿದವು. ಇತ್ತೀಚಿನ ದಿನಗಳಲ್ಲಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ಸದ್ಯದ ರಾಜಕೀಯ ಬೆಳವಣಿಗೆಗಳಿಂದ ಶರೀಫ್‌ರ ರಾಜಕೀಯ ಬದುಕನ್ನು ಅಳೆಯದೆ, ಎಂಬತ್ತು ಮತ್ತು ತೊಂಬತ್ತರ ದಶಕದ ಕಡೆಗೆ ನಾವು ಹೊರಳಬೇಕಾಗಿದೆ. ರೈಲ್ವೆ ಸಚಿವರಾಗಿ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆ, ಕನ್ನಡಿಗರಿಗೆ ನೀಡಿದ ನೆರವು ಅವಿಸ್ಮರಣೀಯ. ದೇಶದ ರೈಲ್ವೆ ಮಾರ್ಗ ಅಭಿವೃದ್ಧಿ, ಗೇಜ್ ಪರಿವರ್ತನೆ, ಬೆಂಗಳೂರಿನಲ್ಲಿ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆ ಇತ್ಯಾದಿಗಳಿಗಾಗಿ ಇಂದಿಗೂ ಶರೀಫ್ ಸ್ಮರಿಸಲ್ಪಡುತ್ತಾರೆ.

ಕಾಂಗ್ರೆಸ್‌ನೊಳಗಿನ ಜಾತಿ ರಾಜಕಾರಣ ಅಡ್ಡಿ ಬರದೇ ಇದ್ದಿದ್ದರೆ, ಈ ನಾಡಿನ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗುತ್ತಿದ್ದರೇನೋ. ಮುಂದಿನ ದಿನಗಳಲ್ಲಿ ಜಾಫರ್ ಶರೀಫ್‌ರನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸುವ ಪ್ರಯತ್ನ ಕಾಂಗ್ರೆಸ್‌ನೊಳಗೆ ನಡೆಯಿತು. ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸಿದ ಸಜ್ಜನ ರಾಜಕೀಯ ಮುತ್ಸದ್ದಿಗಳ ಸಾಲಿನ ಕೊನೆಯ ಕೊಂಡಿಯಾಗಿ ಜಾಫರ್ ಶರೀಫ್ ಬದುಕಿದರು. ಇಂದು ಮುಸ್ಲಿಮರೊಳಗೆ ಇಂತಹ ಮುತ್ಸದ್ದಿಗಳು ಹುಟ್ಟಿ ಬೆಳೆಯದಂತೆ ವ್ಯವಸ್ಥಿತವಾಗಿ ತಡೆಯಲಾಗುತ್ತಿದೆ ಎನ್ನುವ ಆರೋಪಗಳಿವೆ. ಸ್ವತಂತ್ರ ವ್ಯಕ್ತಿತ್ವವಿರುವ, ನಾಯಕತ್ವ ಗುಣಗಳಿರುವ ಮುಸ್ಲಿಮ್ ಸಮುದಾಯದ ನಾಯಕರನ್ನು ತುಳಿಯಲಾಗುತ್ತಿದೆ. ಈ ಕಾರಣದಿಂದಲೇ ಇಂದು ಕಾಂಗ್ರೆಸ್‌ನೊಳಗೆ ಇಣುಕಿದರೆ ಮುಖ್ಯಮಂತ್ರಿಯಾಗುವ ಅರ್ಹತೆಯಿರುವ ಒಬ್ಬ ನಾಯಕನೂ ಕಾಣ ಸಿಗುವುದಿಲ್ಲ. ಇದು ಆಕಸ್ಮಿಕ ಖಂಡಿತ ಅಲ್ಲ ಎನ್ನುವುದನ್ನು ಜಾಫರ್ ಶರೀಫ್ ಅವರ ಕೊನೆಯ ದಿನಗಳು ನಾಡಿಗೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News