ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪ ಸಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2018-11-27 12:27 GMT

ಬೆಂಗಳೂರು, ನ. 27: ರಾಜ್ಯ ಸರಕಾರ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದ್ದು, ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದು ಸಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡಿಗೆ ಬಿಡುವ ನೀರಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಮೇಕೆದಾಟು ಗಡಿಭಾಗದಲ್ಲಿರುವುದರಿಂದ ನಾವು ಅಲ್ಲಿ ನೀರನ್ನು ಬಳಕೆ ಮಾಡಿ ಕೃಷಿ ಮಾಡಲು ಆಗುವುದಿಲ್ಲ ಎಂದರು.

ಡಿ.6ಕ್ಕೆ ಸಭೆ: ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಡಿ.6ರಂದು ರಾಜ್ಯದ ಎಲ್ಲ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ ಸಚಿವರ ಸಭೆ ಕರೆಯಲಾಗಿದ್ದು, ಜಲ ಆಯೋಗ ಯೋಜನೆಗೆ ಅನುಮತಿ ನೀಡಿದ್ದು, ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಏಳು ಮಂದಿ ಅಮಾನತ್ತು: ಜಲಸಂಪನ್ಮೂಲ ಇಲಾಖೆಯಿಂದ ಪಿಡಬ್ಲ್ಯೂಡಿ, ಇತರೆ ಇಲಾಖೆಗಳಿಗೆ ಎರವಲು ಸೇವೆಯಿಂದ ಹೋಗಿದ್ದ ಇಂಜಿನಿಯರ್‌ಗಳನ್ನು ವಾಪಸ್ ಕರೆಸಿಕೊಳ್ಳುತ್ತಿದ್ದು, ಅವರೆಲ್ಲರಿಗೂ ಸ್ಥಳ ನಿಯುಕ್ತಿ ಮಾಡಲಾಗಿದೆ. ನಿಯೋಜಿತ ಸ್ಥಳಕ್ಕೆ ತೆರಳದ ಆರು ಮಂದಿ ಸಹಾಯಕ ಇಂಜಿನಿಯರ್ ಸೇರಿ ಏಳು ಮಂದಿಯನ್ನು ಅಮಾನತ್ತು ಮಾಡಲಾಗಿದೆ ಎಂದರು.

ಹಂಪಿ ಉತ್ಸವ ಮುಂದೂಡಿಕೆ

ರಾಜ್ಯದಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಈ ವರ್ಷ ಆಚರಿಸದಿರಲು ಸರಕಾರ ನಿರ್ಧರಿಸಿದೆ. 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಉತ್ಸವ ಮುಂದೂಡಲು ಸರಕಾರ ತೀರ್ಮಾನಿಸಿದೆ’

-ಡಿ.ಕೆ.ಶಿವಕುಮಾರ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News