ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ: ಪ್ರಸ್ತಾಪ ಕೈ ಬಿಡುವಂತೆ ಎಎಪಿ ಆಗ್ರಹ

Update: 2018-11-27 13:58 GMT

ಬೆಂಗಳೂರು, ನ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಹೆಚ್ಚಿಸುವ ಪ್ರಸ್ತಾಪ ಕೈಬಿಡದಿದ್ದರೆ ವ್ಯಾಪಕ ಹೋರಾಟ ಮಾಡುವುದಾಗಿ ರಾಜ್ಯ ಆಮ್ ಆದ್ಮಿ ಪಾರ್ಟಿ ವಕ್ತಾರ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಸ್ವತ್ತುಗಳಿಗೆ ಶೇ.25, ವಸತಿಯೇತರ ಸ್ವತ್ತುಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವ ಪರಿಷ್ಕರಣೆಯ ಪ್ರಸ್ತಾವ ಬಿಬಿಎಂಪಿ ಆಯುಕ್ತರು ಸಿದ್ಧಪಡಿಸಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಕೊಟ್ಟಿದ್ದು, ನ.28, 29ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಭೆಯಲ್ಲಿ ಅನುಮೋದನೆ ದೊರೆತರೆ ಸಾರ್ವಜನಿಕರಿಗೆ ಹೊರೆಯಾಗಲಿದೆ ಎಂದು ಆರೋಪಿಸಿದರು.

ಪ್ರತಿವರ್ಷ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ಪಾಲಿಕೆ ವಿಫಲವಾಗಿದೆ. ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ. ಇದರಿಂದಾಗಿ ಆಸ್ತಿ ತೆರಿಗೆ ಹೆಚ್ಚಿಸಿದರೆ ಜನರಿಗೆ ಹೊರೆಯಾಗುತ್ತದೆ. ಒಂದು ವೇಳೆ ಪ್ರಸ್ತಾಪ ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿದರೆ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.

ಪಾಲಿಕೆ ಅಧಿಕಾರಗಳು, ಜನಪ್ರನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆಯಲ್ಲಿ ವಸತಿಯೇತರ ಕಟ್ಟಡಗಳಿಂದ ವಸೂಲಾಗಬೇಕಿದ್ದ ಸಾವಿರಾರು ಕೋಟಿ ರೂಪಾಯಿಗಳು ಪ್ರತಿವರ್ಷವೂ ಭ್ರಷ್ಟರ ಜೇಬಿಗೆ ಹೋಗುತ್ತಿದೆ. ಈ ಎಲ್ಲವನ್ನೂ ಪುನರ್ ಪರಿಶೀಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ, ಹಿಂದೆ ತೆರಿಗೆ ವಂಚಿಸಿದ್ದ ಕೋಟ್ಯಂತರ ಹಣವನ್ನು ವಸೂಲು ಮಾಡಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News