ಧರ್ಮಸಂಸದ್ ಅಥವಾ ಸುಪ್ರೀಂಕೋರ್ಟ್?

Update: 2018-11-27 18:31 GMT

ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಕೆಲವು ಪಕ್ಷಗಳಿಗೆ, ಸಂಘಟನೆಗಳಿಗೆ ಶ್ರೀರಾಮನ ನೆನಪಾಗಿದೆ. ಈ ದೇಶದ ಲಕ್ಷಾಂತರ ಜನರಿಗೆ ತಲೆಯ ಮೇಲೆ ಸೂರಿಲ್ಲ. ನೋಟು ನಿಷೇಧದಿಂದ ಲಕ್ಷಾಂತರ ರೈತರು ಮತ್ತು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅರ್ಥವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ನಿರುದ್ಯೋಗ ಹೆಚ್ಚಿದೆ. ‘ಅಚ್ಛೇದಿನ್’ ಭರವಸೆಯೊಂದಿಗೆ ಅಧಿಕಾರಕ್ಕೇರಿದವರು ಈ ದೇಶಕ್ಕೆ ಹಿಂದೆಂದೂ ಕಂಡರಿಯದ ಕೆಟ್ಟ ದಿನಗಳನ್ನು ಕೊಟ್ಟರು. ಕಳೆದ ಬಾರಿ ಮೋದಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಜೆಪಿಗೆ ಈ ಬಾರಿ ಆ ಎರಡೂ ಪದಗಳು ತಮಗೆ ಮತಗಳನ್ನು ತರಲಾವು ಎನ್ನುವುದು ಖಚಿತವಾಗಿದೆ. ಈ ಕಾರಣದಿಂದಲೇ ಬಿಜೆಪಿಗೆ ಮತ್ತೆ ಶ್ರೀರಾಮನ ನೆನಪಾಗಿದೆ. ಶ್ರೀರಾಮಮಂದಿರ ಕಟ್ಟುವ ಮೂಲಕ ಮಾತ್ರ ‘ಅಚ್ಛೇ ದಿನ್’ ಸಾಧ್ಯ ಎಂದು ಬಿಜೆಪಿಯ ಕೆಲ ನಾಯಕರು ಈಗಾಗಲೇ ಘೋಷಿಸಿದ್ದಾರೆ. ಶ್ರೀರಾಮಮಂದಿರ ನಿರ್ಮಾಣವಾಗಲೇಬೇಕು ಎಂಬ ಘೋಷಣೆಗಳು ಬೀದಿಗಿಳಿದಿವೆ. ವಿಪರ್ಯಾಸವೆಂದರೆ, ಉತ್ತರ ಪ್ರದೇಶದಲ್ಲೂ, ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರ ಹಿಡಿದಿದೆ. ಹೀಗಿರುವಾಗ, ಶ್ರೀರಾಮಮಂದಿರ ನಿರ್ಮಾಣವಾಗಬೇಕು ಎಂದು ಅದು ಯಾರೊಂದಿಗೆ ಕೇಳುತ್ತಿದೆ? ಹಿಂದೆಯಾಗಿದ್ದರೆ ದೇಶವನ್ನು ಯುಪಿಎ ಸರಕಾರ ಆಳುತ್ತಿತ್ತು. ಈ ಬಾರಿ ತನ್ನ ವಿರುದ್ಧವೇ ತಾನು ಪ್ರತಿಭಟನೆಗಿಳಿದಂತಿದೆ. ಒಟ್ಟಿನಲ್ಲಿ ದೇಶದ ಜನರು ಸಂಪೂರ್ಣ ಮೂರ್ಖರು ಎಂದು ಬಗೆದು ಬಿಜೆಪಿ ರಾಮಮಂದಿರವನ್ನು ಜಪಿಸಲು ಮುಂದಾಗಿದೆ.

ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಧರ್ಮಸಂಸದ್‌ನ ಬೃಹತ್ ಸಭೆ ನಡೆಯಿತು. ನಿರೀಕ್ಷಿಸಿದಷ್ಟು ಜನರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇನ್ನೊಂದು ಮಹತ್ವದ ಅಂಶವೆಂದರೆ ಸಭೆಯ ಮುಂಚೂಣಿಯಲ್ಲಿದ್ದ ಪಕ್ಷ ಶಿವಸೇನೆ. ಮುಂದಿನ ಬಾರಿಯ ಚುನಾವಣೆಯಲ್ಲಿ ಹಿಂದುತ್ವದ ನಿಜವಾದ ವಾರಸುದಾರರು ಯಾರು ಎನ್ನುವ ಪ್ರಶ್ನೆ ಬಿಜೆಪಿ ಮತ್ತು ಶಿವಸೇನೆಯ ನಡುವೆ ಶೀತಲ ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿಯೊಂದಿಗಿದ್ದೂ ಬಿಜೆಪಿಯ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿರುವ ಪಕ್ಷ ಶಿವಸೇನೆ. ಮಹಾರಾಷ್ಟ್ರದ ಮೈತ್ರಿ ಸರಕಾರದಲ್ಲಿ ಬಿಜೆಪಿಯು ತನಗೆ ಕೊಡಬೇಕಾದ ಗೌರವವನ್ನು ಕೊಟ್ಟಿಲ್ಲ ಎನ್ನುವ ಅಸಮಾಧಾನ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಬಿಜೆಪಿ ಸಂಪೂರ್ಣ ಆಪೋಷನ ತೆಗೆದುಕೊಳ್ಳುವ ಭಯವೂ ಇದೆ. ಉಭಯ ಪಕ್ಷಗಳು ಈವರೆಗೆ ಹಿಂದುತ್ವವನ್ನು ಮುಂದಿಟ್ಟು ಮತಯಾಚಿಸುತ್ತಾ ಬಂದಿದೆ.

ಬಾಳಾಠಾಕ್ರೆಯ ಅಂತ್ಯ, ಮೋದಿ ಪರಿಣಾಮಗಳಿಂದಾಗಿ ಶಿವಸೇನೆ ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ದುರ್ಬಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಸೇನೆ ತಲೆಯೆತ್ತಿ ನಿಲ್ಲಬೇಕಾದರೆ ಅದು ಬಿಜೆಪಿಯೊಂದಿಗೆ ಹಿಂದುತ್ವದ ಸ್ಪರ್ಧೆಯಲ್ಲಿ ಗೆಲ್ಲಬೇಕಾಗಿದೆ. ಆದುದರಿಂದಲೇ ಬಿಜೆಪಿಗೆ ಮುಜುಗರವುಂಟು ಮಾಡಲು ಶಿವಸೇನೆ ಜೋರು ದನಿಯಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ಮಾತನಾಡುತ್ತಿದೆ. ತನ್ನದೇ ಸರಕಾರ ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಕಾರಣ ಸದ್ಯಕ್ಕಂತೂ ರಾಮಮಂದಿರದ ಬಗ್ಗೆ ಬೀದಿಗಿಳಿಯುವುದು ಬಿಜೆಪಿಗೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ರಾಮಮಂದಿರದ ಬಗ್ಗೆ ಮಾತನಾಡುವುದಕ್ಕೆ ಮುನ್ನವೇ ಶಿವಸೇನೆ ಮಾತನಾಡ ಹೊರಟಿದೆ. ರಾಮನನ್ನು ಬಿಜೆಪಿಯ ವಿರುದ್ಧ ಶಿವಸೇನೆ ಈ ಕಾರಣಕ್ಕಾಗಿ ಎತ್ತಿ ಕಟ್ಟುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯೂ ಶಿವಸೇನೆಯ ಉದ್ದೇಶವನ್ನು ಅರಿತಿದೆ. ‘‘ರಾಮಮಂದಿರ ನಿರ್ಮಾಣದಲ್ಲಿ ಶಿವಸೇನೆಯ ಪಾತ್ರ ಏನೂ ಇಲ್ಲ’’ ಎಂದು ಬಿಜೆಪಿ ಈಗಾಗಲೇ ಹೇಳಿಕೆ ನೀಡಿದೆ. ಶಿವಸೇನೆ ಯಾವತ್ತೂ ರಾಮಮಂದಿರ ನಿರ್ಮಾಣಕ್ಕಾಗಿ ಬೀದಿಗಿಳಿದಿರಲಿಲ್ಲ. ಬಾಳಾ ಠಾಕ್ರೆ ಇಂದು ಜೀವಂತ ಇದ್ದಿದ್ದರೆ ಧರ್ಮ ಸಂಸದ್ ಸಭೆಯಲ್ಲಿ ಭಾಗವಹಿಸಲು ಒಪ್ಪುತ್ತಿರಲಿಲ್ಲ ಎಂದೂ ಶಿವಸೇನೆಯ ಹೋರಾಟವನ್ನು ವ್ಯಂಗ್ಯವಾಡಿದೆ.

ಬಿಜೆಪಿ ಈಗಾಗಲೇ ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್ ತೊಗಾಡಿಯ ಜೊತೆಗೂ ಭಿನ್ನಮತ ಕಟ್ಟಿಕೊಂಡಿದೆ. ಮೋದಿ ಸರಕಾರದ ವಿರುದ್ಧ ಬಹಿರಂಗ ಪತ್ರಿಕಾಗೋಷ್ಠಿಯನ್ನು ಮಾಡಿದವರು ತೊಗಾಡಿಯಾ. ತನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆ ಎಂದೂ ಅವರು ಆರೋಪಿಸಿದ್ದರು. ಹಿಂದಿನಿಂದಲೂ ವಿಎಚ್‌ಪಿ ರಾಮಮಂದಿರ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸಿತ್ತು. ತಮ್ಮನ್ನು ಬಳಸಿಕೊಂಡ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಮರೆತು ಬಿಟ್ಟಿದೆ ಎನ್ನುವುದು ವಿಎಚ್‌ಪಿಯೊಳಗಿರುವ ಕೆಲವು ಮುಖಂಡರ ಆಕ್ರೋಶವಾಗಿದೆ. ಇದೀಗ ವಿಎಚ್‌ಪಿಯ ಕೆಲವು ನಾಯಕರು ಬಿಜೆಪಿಯ ವಿರುದ್ಧ ಅದೇ ರಾಮಮಂದಿರವನ್ನು ಎತ್ತಿಕಟ್ಟಲು ಮುಂದಾಗಿದ್ದಾರೆ. ಬಿಜೆಪಿಯನ್ನು ಚುನಾವಣೆಗೆ ಮುಂಚೆಯೇ ಇಕ್ಕಟ್ಟಿನಲ್ಲಿ ಸಿಲುಕಿಸುವುದು ಇವರ ಉದ್ದೇಶವಾಗಿದೆ.

ಇದರ ಅರ್ಥ ಇವರೆಲ್ಲ ಬಿಜೆಪಿಯ ವಿರುದ್ಧ ಇದ್ದಾರೆ ಎನ್ನಲಾಗುವುದಿಲ್ಲ. ಈ ಮೂಲಕ ಶಿವಸೇನೆ ಮತ್ತು ವಿಎಚ್‌ಪಿ ಬಿಜೆಪಿಯನ್ನು ಪರೋಕ್ಷವಾಗಿ ಬ್ಲಾಕ್‌ಮೇಲ್ ಮಾಡುತ್ತಿದೆ. ರಾಮನ ಹೆಸರಿಲ್ಲದೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎನ್ನುವುದು ಇವರಿಗೆ ಸ್ಪಷ್ಟವಾಗಿ ಗೊತ್ತಿದೆ. ವಿಎಚ್‌ಪಿಯ ಮುಖಂಡರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಧ್ವನಿಗೂಡಿಸಬೇಕಾದರೆ ಅವರ ಕೆಲವು ಬೇಡಿಕೆಗಳನ್ನು ಬಿಜೆಪಿ ಈಡೇರಿಸಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಶಿವಸೇನೆಗೆ ಸೂಕ್ತ ಪ್ರಾತಿನಿಧ್ಯವನ್ನು ಬಿಜೆಪಿ ನೀಡಬೇಕು. ಇಲ್ಲವಾದರೆ, ರಾಮಮಂದಿರವನ್ನು ಬಿಜೆಪಿಯ ವಿರುದ್ಧ ಬಳಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಬಿಜೆಪಿ ನಾಯಕರಿಗೆ ಶಿವಸೇನೆ ನೀಡುತ್ತಿದೆ. ತಮ್ಮ ತಮ್ಮ ಬೇಡಿಕೆಗಳು ಈಡೇರಿದ್ದೇ ಆದಲ್ಲಿ ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ರಾಮನನ್ನು ಜಪಿಸಿ ಮತಗಳನ್ನು ಯಾಚಿಸುತ್ತಾರೆ. ಇಲ್ಲವಾದರೆ ಶಿವಸೇನೆ ಮತ್ತು ವಿಎಚ್‌ಪಿಯೇ ಬಿಜೆಪಿಗೆ ತಲೆನೋವಾಗಲಿದೆ. ಅಲ್ಲಿಯವರೆಗೆ ಪರಿಸ್ಥಿತಿ ಹದಗೆಡಲು ಆರೆಸ್ಸೆಸ್ ಖಂಡಿತ ಬಿಡಲಾರದು.

ಮೇಲ್ನೋಟಕ್ಕೆ ರಾಮಮಂದಿರ ಹೋರಾಟ ಸರಕಾರದ ವಿರುದ್ಧ ಅನ್ನಿಸಿದರೂ, ಅದು ನ್ಯಾಯಾಂಗದ ವಿರುದ್ಧ ಹೋರಾಟ ನಡೆಸುತ್ತಿದೆ. ನಮಗೆ ಸುಪ್ರೀಂಕೋರ್ಟ್ ಮುಖ್ಯವಲ್ಲ, ಧರ್ಮಸಂಸದ್ ಮುಖ್ಯ ಎನ್ನುವುದನ್ನು ತಮ್ಮ ಹೋರಾಟದ ಮೂಲಕ ಅವರು ಪ್ರತಿಪಾದಿಸುತ್ತಿದ್ದಾರೆ. ಈ ಹೋರಾಟದಲ್ಲಿ ಅವರು ಗೆದ್ದರೆ ಸಹಜವಾಗಿಯೇ ಸಂವಿಧಾನ ಸೋಲುತ್ತದೆ. ಸಂವಿಧಾನ ಸೋತ ಮೇಲೆ ಪ್ರಜಾಸತ್ತಾತ್ಮಕ ಚುನಾವಣೆಗೆ ಏನು ಅರ್ಥ ಉಳಿಯಿತು? ಆದುದರಿಂದ ಮುಂದಿನ ಚುನಾವಣೆ ಒಂದು ಪ್ರಶ್ನೆಯ ತಳಹದಿಯ ಮೇಲೆ ನಿಂತಿದೆ ಎಂದು ನಾವು ನಂಬಬೇಕಾಗುತ್ತದೆ. ‘‘ನಮಗೆ ಧರ್ಮಸಂಸದ್ ಮುಖ್ಯವೋ, ಸುಪ್ರೀಂಕೋರ್ಟ್ ಮುಖ್ಯವೋ?’. ಈ ಆಯ್ಕೆಯಲ್ಲಿ ದೇಶದ ಭವಿಷ್ಯ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News