ಸದನದಲ್ಲಿ ಶಿಕ್ಷಣದ ವಿಷಯಗಳ ಚರ್ಚೆಗೆ ಆದ್ಯತೆ ನೀಡಲು ಕ್ರಮ: ಬಸವರಾಜ ಹೊರಟ್ಟಿ

Update: 2018-11-28 14:49 GMT

ಬೆಂಗಳೂರು, ನ.28: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಶಿಕ್ಷಣದ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ವಹಿಸಲಾಗುವುದು ಎಂದು ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಬುಧವಾರ ನಗರದ ಶಾಸಕರ ಭವನದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್(ಎಸ್‌ಐಓ) ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಸದನದಲ್ಲಿ ಶಿಕ್ಷಣ’ ಎಂಬ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಸನಸಭೆಗಳಲ್ಲಿ ಸದಸ್ಯರ ಭಾಗವಹಿಸುವಿಕೆಯಿಂದ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನದಲ್ಲಿ ಹೆಚ್ಚು ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ ಹೆಚ್ಚಿಗೆ ಶೈಕ್ಷಣಿಕ ವಿಷಯಗಳನ್ನೂ ಚರ್ಚಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಇಂದಿನ ವಿಶ್ವವಿದ್ಯಾಲಯಗಳು ಸುಧಾರಣೆಯಾಗದಿದ್ದರೆ, ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಆದರೆ, ಯುಜಿಸಿ ಜಾರಿಯಾದ ನಂತರ ವಿವಿಗಳು ಹಾಳಾಗಿವೆ. ಅದಕ್ಕೆ ಪರ್ಯಾಯ ದಾರಿಗಳನ್ನು ಹುಡುಕಬೇಕು ಎಂದ ಅವರು, ಹಿಂದಿನ ಪ್ರಾಧ್ಯಾಪಕರು, ಶಿಕ್ಷಕರು ದಿನದಲ್ಲಿ 2-3 ಗಂಟೆ ಗ್ರಂಥಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದರು. ಇಂದಿನ ಪ್ರಾಧ್ಯಾಪಕರು ದಿನಪೂರ್ತಿ ಇಂಟರ್‌ನೆಟ್‌ನಲ್ಲಿರುತ್ತಾರೆ. ಅವರನ್ನು ಪ್ರಶ್ನಿಸಿದರೆ ಎಲ್ಲವೂ ಅಂತರ್ಜಾನದಲ್ಲಿಯೇ ಸಿಗುತ್ತದೆ ಎಂದು ಉತ್ತರಿಸುತ್ತಿದ್ದಾರೆ ಎಂದರು.

ಲೇಖಕ ಶ್ರೀಪಾದ್ ಭಟ್ ಮಾತನಾಡಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ. ಆದರೆ, ಇಂದಿನ ವ್ಯವಸ್ಥೆಯ ಕ್ರೌರ್ಯ, ಅಮಾನವೀಯ ನಡೆಯಿಂದಾಗಿ ಎಲ್ಲವೂ ಸೊರಗಿ ಹೋಗುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಆಳುವ ವರ್ಗ ಮುಂದಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರು ಉತ್ತಮ ಶಿಕ್ಷಣ ಪಡೆದುಕೊಂಡರೂ ಅತಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಆದರೆ, ಖಾಸಗಿ ಕಂಪೆನಿಗಳಲ್ಲಿ ಅವಿದ್ಯಾವಂತ ಕಾರ್ಮಿಕರು ಕನಿಷ್ಠ ವೇತನದ ಜತೆಗೆ ಇಎಸ್‌ಐ, ಪಿಎಫ್ ಸೌಲಭ್ಯಗಳು ಪಡೆಯುತ್ತಿದ್ದಾರೆ. ಸದನಗಳಲ್ಲಿರುವ ಸದಸ್ಯರಿಗೆ ಶಿಕ್ಷಕರ ಸಮಸ್ಯೆ ಮುಖ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನದ ಸಂದರ್ಭದಲ್ಲಿ ಸದಸ್ಯರು ಕೇಳುತ್ತಿರುವ ಪ್ರಶ್ನೆಗಳು ಕೇವಲ ಅಂಕಿ-ಸಂಖ್ಯೆಗಳ ಉತ್ತರಗಳಿಗಷ್ಟೇ ಸೀಮಿತಗೊಂಡಿವೆ. ಸರಕಾರದ ಅಂತರ್ಜಾಲದಲ್ಲಿಯೇ ಸಿಗುವ ಉತ್ತರಗಳನ್ನು ಸದನದಲ್ಲಿ ಪಡೆಯುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಸಬಲೀಕರಣಕ್ಕೆ ಬೇಕಾದ ಒಂದು ಪ್ರಶ್ನೆಯನ್ನೂ ಕೇಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದುವರೆಗೂ ಎಷ್ಟು ಶಾಲೆಗಳಿಗೆ, ಎಷ್ಟು ಹಣ ಖರ್ಚಾಗಿದೆ, ಶೌಚಾಲಯಗಳು ಇದೆಯಾ-ಇಲ್ಲವಾ ಎಂಬಂತಹ ಪ್ರಶ್ನೆ ಕೇಳುತ್ತಾರೆ. ಅದೇ ವೇಳೆ ಅನುದಾನ ಸಮರ್ಪಕವಾಗಿ ಬಳಕೆ, ಅನುಷ್ಠಾನ ಸೇರಿದಂತೆ ಜವಾಬ್ದಾರಿಯುತವಾದ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಮೂಲಸೌಕರ್ಯಗಳು, ಶಿಕ್ಷಕರ ನೇಮಕಾತಿ, ಆರ್‌ಟಿಐ ಅನುಷ್ಠಾನ ಮತ್ತು ಅನಾಹುತಗಳು, ಸರಕಾರಿ ಶಾಲೆಗಳ ವಿಲೀನ ಸೇರಿದಂತೆ ಸಾಮಾನ್ಯರ ಶಿಕ್ಷಣಕ್ಕೆ ಅಗತ್ಯವಾದ ಯಾವುದೇ ಪ್ರಶ್ನೆಗಳು ಶಾಸಕರಿಗೆ, ಅಧಿಕಾರಿಗಳಿಗೆ ಕಾಡುತ್ತಲೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬೋಧನಾ ಪದ್ಧತಿ ಬದಲಾಗಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಅಥವಾ ಕಾಲಕ್ಕೆ ತಕ್ಕಂತೆ ಬೋಧನಾ ಕ್ರಮ ಬದಲಾಗಬೇಕಿದೆ. ಆದರೆ, ಇದುವರೆಗೂ ನಮ್ಮ ಬೋಧನಾ ಕ್ರಮ ಹಾಗೂ ಕಲಿಕಾ ಕ್ರಮ ಬದಲಾಗುತ್ತಿಲ್ಲ. ಅಲ್ಲದೆ, ಇಂದಿನ ಸರಕಾರಗಳು ಶಿಕ್ಷಣಕ್ಕೆ ನೀಡುತ್ತಿರುವ ಅನುದಾನವೂ ಅತ್ಯಂತ ಕಡಿಮೆಯದ್ದಾಗಿದೆ ಎಂದು ಶ್ರೀಪಾದ್ ಭಟ್ ಹೇಳಿದರು.

ಯುಜಿಸಿ ಬದಲಾವಣೆಯಿಂದ ವಿವಿಗಳಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾವಣೆ ಅಸಾಧ್ಯ. ಪ್ರಸ್ತುತವಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಮುಂದಾಗದೇ, ಇರುವ ಕೆಟ್ಟ ವ್ಯವಸ್ಥೆಯನ್ನು ಹಾಗೇ ಬಿಟ್ಟು ಹೊಸ ಶೈಕ್ಷಣಿಕ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು. ಅದರ ಮೂಲಕ ಹೊಸ ರೀತಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಚಿಂತನೆ, ಸಂಶೋಧನೆಗಳನ್ನು ಮಾಡಬೇಕು. ಅನಂತರ ಕಾಲಕ್ಕೆ ತಕ್ಕಂತೆ ವ್ಯವಸ್ಥೆಯೂ ಬದಲಾಗುತ್ತದೆ.

- ಪ್ರೊ.ಎ.ನಾರಾಯಣ, ಪ್ರಾಧ್ಯಾಪಕರು, ಅಜೀಮ್ ಪ್ರೇಂಜಿ ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News