ಆಯುಷ್ಮಾನ್ ಭಾರತದ ಆಯಸ್ಸು ಸುದೀರ್ಘವಾಗಲಿ

Update: 2018-11-29 04:20 GMT

ಈ ದೇಶದಲ್ಲಿ ಸಾಲಗಾರನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕೃಷಿಕನೇ ಆಗಬೇಕಾಗಿಲ್ಲ. ಕ್ಯಾನ್ಸರ್‌ನಂತಹ ಒಂದು ಮಹಾಮಾರಿ ಒಂದು ಮಧ್ಯಮ ವರ್ಗದ ಮನೆಯನ್ನು ಪ್ರವೇಶಿಸಿದರೆ, ಅವರು ತಮ್ಮ ಮನೆ ಮಠಗಳನ್ನು ಮಾರಿ, ಸಾಲಗಾರರಾಗಿ ಅಂತಿಮವಾಗಿ ಕ್ಯಾನ್ಸರ್ ಬಾಧಿತನ ಜೊತೆಗೆ ಇಡೀ ಕುಟುಂಬವೇ ಸಾಯಬೇಕಾದಂತಹ ಸ್ಥಿತಿಯಿದೆ. ಸದ್ಯದ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆಗಳ ಕುರಿತಂತೆ ವ್ಯಾಪಕ ಅಸಮಾಧಾನಗಳು ಕೇಳಿ ಬರುತ್ತಿವೆ. ಖಾಸಗಿ ಆಸ್ಪತ್ರೆಗಳ ಲಾಬಿಗಳು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳನ್ನು ಹಂತಹಂತವಾಗಿ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳು ನುಂಗಿ ಹಾಕುತ್ತಿವೆ ಎನ್ನುವ ಆರೋಪಗಳಿರುವ ಈ ದಿನಗಳಲ್ಲಿ, ಮಧ್ಯಮವರ್ಗದ ಮಂದಿಗೆ ಸಣ್ಣ ಪುಟ್ಟ ಕಾಯಿಲೆಗಳೂ ಪೇಡಂಭೂತವಾಗಿ ಕಾಡುತ್ತವೆ. ಬಡತನ ರೇಖೆಗಿಂತ ಕೆಳಗಿನವರಿಗೆ ಆ ಕಾರಣಕ್ಕಾಗಿ ಕೆಲವು ಸೌಲಭ್ಯಗಳಿವೆ. ಆದರೆ ಮಧ್ಯಮ ವರ್ಗದ ಮಂದಿ ಆರೋಗ್ಯ ಮತ್ತು ಶಿಕ್ಷಣದ ವಿಷಯದಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಒಂದು ದೇಶದ ಸಾರ್ವಜನಿಕ ಆಸ್ಪತ್ರೆಗಳೇ ಆ ದೇಶದ ಆರೋಗ್ಯವನ್ನು ಹೇಳುತ್ತದೆ. ಅಷ್ಟೇ ಅಲ್ಲ, ದೇಶದ ಭವಿಷ್ಯವೂ ಇದನ್ನು ಅವಲಂಬಿಸಿಕೊಂಡಿದೆ. ದೇಶದ ಅಡಿಪಾಯವೇ ಆರೋಗ್ಯವಂತ ಜನರು. ಈ ನಿಟ್ಟಿನಲ್ಲಿ ಸರಕಾರವೊಂದು ತನ್ನ ಜನರ ಆರೋಗ್ಯಕ್ಕಾಗಿ ಎಷ್ಟು ಹಣವನ್ನು ಮೀಸಲಿಡುತ್ತದೆ ಎನ್ನುವುದು ಮಹತ್ವವನ್ನು ಪಡೆಯುತ್ತದೆ.

ವಿಶ್ವಬ್ಯಾಂಕಿನ ಪ್ರಕಾರ 2015ರಲ್ಲಿ ಭಾರತವು ತನ್ನ ಒಟ್ಟಾರೆ ದೇಶಿಯ ಉತ್ಪನ್ನದ (ಜಿಡಿಪಿ)ಶೇ.3.8ರಷ್ಟನ್ನು ಮಾತ್ರ ಆರೋಗ್ಯ ಸೇವೆಗಳ ಮೇಲೆ ವೆಚ್ಚ ಮಾಡಿತ್ತು. ಆದರೆ ಆರೋಗ್ಯ ವೆಚ್ಚದ ಜಾಗತಿಕ ಸರಾಸರಿ ಶೇ.9.9 ಆಗಿದ್ದರೆ ಅಮೆರಿಕದಲ್ಲಿ ಈ ಪ್ರಮಾಣ ಶೇ.16.8ರಷ್ಟಿದೆ. ಭಾರತದ ಶೇ.15ರಷ್ಟು ಜನರು ಮಾತ್ರ ಆರೋಗ್ಯ ವಿಮೆಯನ್ನು ಪಡೆದಿದ್ದಾರೆ ಮತ್ತು ದೇಶದಲ್ಲಿ ಶೇ.94ರಷ್ಟು ವೆಚ್ಚವನ್ನು ಸ್ವಂತ ಕಿಸೆಯಿಂದಲೇ ಭರಿಸಲಾಗುತ್ತಿದೆ. ಹೀಗಾಗಿ ಯಾವುದಾದರೂ ಒಂದು ಅನಿರೀಕ್ಷಿತ ಆರೋಗ್ಯ ಸಂಬಂಧಿ ವೆಚ್ಚಗಳು ಇಡೀ ಕುಟುಂಬವನ್ನು ಶಾಶ್ವತ ಸಾಲಗಾರರನ್ನಾಗಿ ಮಾಡಿಬಿಡುವ ಸಾಧ್ಯತೆಯನ್ನು ಹೊಂದಿವೆ. ಈ ಎಲ್ಲಾ ಕಾರಣದಿಂದ, ಮೋದಿಯವರ ‘ಆಯುಷ್ಮಾನ್ ಭಾರತ’ ದೇಶದ ಆರೋಗ್ಯವನ್ನು ಎತ್ತಿ ಹಿಡಿಯಬಹುದು ಮತ್ತು ಇದು ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದುದು ಎಂದು ನಂಬಲಾಗಿದೆ. ಈ ಯೋಜನೆಯನ್ವಯ ದೇಶದ 10 ಕೋಟಿ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳಷ್ಟು ಆರೋಗ್ಯ ವಿಮೆಯನ್ನು ಒದಗಿಸಲಾಗುವುದೆಂದು ಘೋಷಿಸಲಾಗಿದೆ.

ಈ ಹಿಂದಿನ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗಿಂತ ಭಿನ್ನವಾಗಿ ಈ ಎಬಿ-ಎನ್‌ಎಚ್‌ಪಿಎಮ್ ಯೋಜನೆಯಡಿ ಸರಕಾರಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಯನ್ನೂ ಸಹ ಒದಗಿಸಲಾಗುವುದು ಹಾಗೂ ಈ ಯೋಜನೆಯಡಿ ಈ ಹಿಂದೆ ಇದ್ದ ವಿಮಾ ಮೊತ್ತವನ್ನು 30,000 ರೂ.ಯಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಹಾಗೂ ಆಂಧ್ರಪ್ರದೇಶದ ರಾಜೀವ್ ಆರೋಗ್ಯಶ್ರೀ ಆರೋಗ್ಯ ವಿಮಾ ಯೋಜನೆಯ ಮಾದರಿಯಲ್ಲಿ ಇಡೀ ಪ್ರಕ್ರಿಯೆಯನ್ನು ಡಿಜಿಟೀಕರಣಗೊಳಿಸಲಾಗುವುದು ಮತ್ತು ದೇಶದ ಶೇ.40ರಷ್ಟು ಜನತೆಯನ್ನು ಈ ಯೋಜನೆಯ ಫಲಾನುಭವಿಗಳನ್ನಾಗಿಸುವ ಉದ್ದೇಶವನ್ನು ಸರಕಾರ ವ್ಯಕ್ತಪಡಿಸಿದೆ. ಆದರೆ ಈ ಯೋಜನೆಯ ದುರುಪಯೋಗದ ಕುರಿತಂತೆ ಈಗಾಗಲೇ ಪ್ರಶ್ನೆಗಳು ಎದ್ದಿವೆ. ಯೋಜನೆಯೇನೋ ಒಳ್ಳೆಯ ಉದ್ದೇಶದಿಂದ ಕೂಡಿದೆ, ಆದರೆ ಕೆಲವು ಬಿಕ್ಕಟ್ಟುಗಳು ಯೋಜನೆಯ ಗುರಿಯನ್ನು ವಿಫಲಗೊಳಿಸಬಹುದು ಎನ್ನುವುದು ಅವುಗಳ ಆತಂಕವಾಗಿದೆ. ಈ ಯೋಜನೆಗೆ ತಗಲುವ ವೆಚ್ಚದ ಶೇ.40ರಷ್ಟು ಮೊತ್ತವನ್ನು ರಾಜ್ಯ ಸರಕಾರಗಳೇ ಭರಿಸಬೇಕಿದೆ. ಇದು ರಾಜ್ಯ ಸರಕಾರಗಳ ಮೇಲೆ ಹೆಚ್ಚುವರಿ ವಿತ್ತೀಯ ಹೊರೆಯನ್ನು ಹಾಕುವುದರಿಂದ ಅವು ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸುವಂತೆ ಕೇಂದ್ರ ಸರಕಾರವನ್ನೇ ಕೇಳಬಹುದು. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯನ್ನು ಹೊಂದಿರುವ ಬಡರಾಜ್ಯಗಳಿಗೆ ಇದು ಹೆಚ್ಚಿನ ಸಮಸ್ಯೆಯನ್ನೇ ಉಂಟುಮಾಡಲಿದೆ. ಹೀಗಾಗಿ ಈ ಯೋಜನೆಯು ಬಡರಾಜ್ಯಗಳಿಗೆ ಇನ್ನಷ್ಟು ಹೊರೆ ಮತ್ತು ಸಂಕಟವನ್ನು ತಂದಿಡಲಿದೆ.

ಹಾಗೆಯೇ ಈ ಯೋಜನೆ ನಗರ ಪ್ರದೇಶದ ಜನರಿಗೆ ಸ್ಪಂದಿಸಿದಷ್ಟು ವೇಗವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಸ್ಪಂದಿಸದು. ಯಾಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆಯಿದೆ. ದೇಶದ ಶೇ.80ರಷ್ಟು ವೈದ್ಯರು ಮತ್ತು ಶೇ.75ರಷ್ಟು ಚಿಕಿತ್ಸಾಲಯಗಳು ನಗರ ಭಾರತದಲ್ಲಿದ್ದು ದೇಶದ ಶೇ.28ರಷ್ಟು ಜನಸಂಖ್ಯೆಗೆ ಮಾತ್ರ ಆರೋಗ್ಯ ಸೇವೆ ಒದಗಿಸುತ್ತಿವೆ. ಇದರಿಂದಾಗಿ ಉಳಿದ ಭಾರತದಲ್ಲಿ ಮೂಲಭೂತ ಆರೋಗ್ಯ ಸೌಕರ್ಯಗಳ ತೀವ್ರವಾದ ಅಗತ್ಯವಿದೆ. ಭಾರತದ ಆಸ್ಪತ್ರೆಗಳಲ್ಲಿ 1000 ಜನಸಂಖ್ಯೆಗೆ ಒಂದು ಹಾಸಿಗೆ ಲಭ್ಯವಿದ್ದರೆ ಅಭಿವೃದ್ಧಿಹೊಂದಿದ ದೇಶಗಳಲ್ಲಿ ಇದು ಶೇ.6.5 ರಷ್ಟಿದೆ. ಭಾರತದಲ್ಲಿ 1000 ಜನರಿಗೆ ಶೇ.0.6ರಷ್ಟು ವೈದ್ಯರು ಲಭ್ಯವಿದ್ದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 3 ವೈದ್ಯರು ಲಭ್ಯವಿದ್ದಾರೆ. ಭಾರತದಲ್ಲಿ ಶೇ.37ರಷ್ಟು ಜನರು ಮಾತ್ರ ವಾಸಸ್ಥಳದ 5 ಕಿ.ಮೀ. ಒಳಗೆ ಆಸ್ಪತೆಯಲ್ಲಿ ಒಳರೋಗಿಗಳಾಗಿ ಆರೋಗ್ಯ ಸೇವೆ ಪಡೆದುಕೊಳ್ಳುವ ಸೌಲಭ್ಯವನ್ನು ಪಡೆದಿದ್ದರೆ ಕೇವಲ ಶೇ.68ರಷ್ಟು ಜನರಿಗೆ ಮಾತ್ರ 5 ಕಿ.ಮೀ. ಒಳಗೆ ಹೊರರೋಗಿಗಳಾಗಿ ಆರೋಗ್ಯ ಸೇವೆ ಪಡೆದುಕೊಳ್ಳುವ ಸೌಕರ್ಯವಿದೆ. ವಿಶ್ವಬ್ಯಾಂಕಿನ ಪ್ರಕಾರ 2015ರ ವೇಳೆಗೂ ಭಾರತದ ಶೇ.15ರಷ್ಟು ಮಕ್ಕಳು ವ್ಯಾಕ್ಸಿನ್ ಸೌಲಭ್ಯವನ್ನು ದಕ್ಕಿಸಿಕೊಳ್ಳುವ ಪರಿಸ್ಥಿಯಲ್ಲಿರಲಿಲ್ಲ.

ಸರಕಾರಿ ಆಸ್ಪತ್ರೆಗಳ ಕೊರತೆ ಮತ್ತು ಅದರ ಅವ್ಯವಸ್ಥೆಯ ಲಾಭವನ್ನು ಖಾಸಗಿ ಆಸ್ಪತ್ರೆಗಳು ತಮ್ಮದಾಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸರಕಾರಿ ಆರೋಗ್ಯ ಸೇವೆಗಳು ಇಲ್ಲದಿರುವ ಪರಿಸ್ಥಿತಿಯು ಖಾಸಗಿ ಕ್ಷೇತ್ರದ ಮೇಲೆ ಅವಲಂಬನೆಯಾಗುವುದನ್ನು ಅನಿವಾರ್ಯಗೊಳಿಸುತ್ತದೆ. ವಿಮೆ ಹೊಂದಿರುವ ಶ್ರೀಸಾಮಾನ್ಯನನ್ನು ಅದು ಶೋಷಿಸುತ್ತಾ ತನ್ನ ಖಜಾನೆಯನ್ನು ತುಂಬಬಹುದು. ಮಾರಣಾಂತಿಕ ಸ್ಥಿತಿಯಲ್ಲಿರುವ ರೋಗಿಯ ಮೇಲೆ ಅನಗತ್ಯವಾಗಿ ಹಲವು ಶಸ್ತ್ರ ಚಿಕಿತ್ಸೆಗಳನ್ನು ನಡೆಸಬಹುದು. ಆ ರೋಗಿ ಹೇಗಿದ್ದರೂ ಸಾಯುತ್ತಾನೆ. ಆದರೆ ಆ ರೋಗಿಯ ಕುಟುಂಬಗಳು ಆರೋಗ್ಯ ವಿಮೆ ಇಲ್ಲದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಖಾಸಗಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ವೆಚ್ಚದಿಂದ ಇನ್ನೂ ದೊಡ್ಡ ಸಾಲದ ಕೂಪಕ್ಕೆ ದೂಡಲ್ಪಡುತ್ತಾರೆ. ಅದೇ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ನಡವಳಿಕೆಗಳ ಮೇಲೂ ಉಸ್ತುವಾರಿ ಇಡುವ ಅಗತ್ಯವಿದೆ. ಖಾಸಗಿ ಚಿಕಿತ್ಸಾಲಯವನ್ನು ನಡೆಸುವುದು ಹೆಚ್ಚು ಲಾಭಕಾರಿಯಾಗಿರುವುದರಿಂದ ಸರಕಾರಿ ವೈದ್ಯರು ಪರ್ಯಾಯವಾದ ಖಾಸಗಿ ಚಿಕಿತ್ಸಾಲಯವನ್ನು ನಡೆಸುವುದು ಎಲ್ಲರೂ ಬಲ್ಲ ಸಂಗತಿಯೇ. ಆರೋಗ್ಯ ವಿಮೆಯು ಖಾಸಗಿ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿರುವುದರಿಂದ ಅದು ಸರಕಾರಿ ವೈದ್ಯರು ಖಾಸಗಿ ವೃತ್ತಿ ನಡೆಸಲು ಅಥವಾ ಖಾಸಗಿ ನರ್ಸಿಂಗ್ ಹೋಮನ್ನೇ ತೆರೆಯಲು ಉತ್ತೇಜನವನ್ನು ಕೊಡಬಹುದು. ಜೊತೆಗೆ ವಿಮೆಯ ಧೈರ್ಯದಿಂದಾಗಿ ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವ ಪರಿಪಾಠ ಹೆಚ್ಚಾಗಬಹುದು. ತಾವೀಗ ದುಬಾರಿ ಖಾಸಗಿ ಆಸ್ಪತ್ರೆಗಳಲ್ಲೂ ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದು ಎಂಬ ಮನೋಭಾವದಿಂದ ಜನರು ಸಣ್ಣಪುಟ್ಟ ತೊಂದರೆಗಳಿಗೂ ಖಾಸಗಿ ಆಸ್ಪತ್ರೆಗಳನ್ನು ಎಡತಾಕಬಹುದು. ಈ ಎಲ್ಲಾ ಅಂಶಗಳ ಮೇಲೆ ನಿಗಾ ಇಡಬಹುದಾದ ಒಂದು ಉಸ್ತುವಾರಿ ಸಂಸ್ಥೆಯ ಅಗತ್ಯವಿದೆ.

ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಿರುವ ಸಂಸ್ಥೆಗಳಿಗೆ ಈ ಸಂಭವನೀಯ ಸಮಸ್ಯೆಗಳ ಬಗ್ಗೆ ಅರಿವಿದೆಯೇ ಮತ್ತು ಅವುಗಳನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದುದರಿಂದ ವಿಮೆಯ ಹಣ ಖಾಸಗಿ ಆಸ್ಪತ್ರೆಗಳೆಂಬ ವ್ಯಾಪಾರಿಗಳಿಗೆ ಭಾರೀ ಲಾಛ ತಂದುಕೊಂಡುವುದರಿಂದ ಇದು ದುರುಪಯೋಗವಾಗುವ ಸಾಧ್ಯತೆಗಳನ್ನು ನಾವು ಗಮನಿಸಬೇಕು. ಇದೇ ಸಂದರ್ಭದಲ್ಲಿ ಸರಕಾರಿ ಆರೋಗ್ಯ ಸೇವೆ ಅಭಿವೃದ್ಧಿಗೊಳಿಸುವತ್ತ ಕ್ರಮ ತೆಗೆದುಕೊಳ್ಳುವುದು ಉತ್ತಮ ಕ್ರಮವಾಗಿದೆ. ಸರಕಾರಿ ಆಸ್ಪತ್ರೆಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಾ ಹೋದಂತೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ನೀಡಿದಂತೆಯೇ ಖಾಸಗಿ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯ ವೆಚ್ಚವನ್ನು ಇಳಿಸತೊಡಗುತ್ತವೆ.

ಎಲ್ಲೆಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯು ಅಭಿವೃದ್ಧಿಗೊಂಡಿದೆಯೋ ಅಲ್ಲೆಲ್ಲಾ ಖಾಸಗಿ ಆರೋಗ್ಯ ಸೇವೆಯ ದರಗಳು ಅಗ್ಗವಾಗಿಯೇ ಇರುತ್ತದೆಂಬುದು ಈಗ ಸರ್ವವಿಧಿತವಾದ ಸಂಗತಿಯಾಗಿದೆ. ಉದಾಹರಣೆಗೆ ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳು ಸರಕಾರಿ ಆಸ್ಪತ್ರೆಗಳೊಂದಿಗೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದು ಖಾಸಗಿ ಆಸ್ಪತ್ರೆಗಳು ನೀಡುವ ಸೇವೆಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವುಗಳ ದರವು ಅಗ್ಗವಾಗಿಯೇ ಇವೆ. ಇದಕ್ಕೆ ತದ್ವಿರುದ್ಧವಾಗಿ ಉತ್ತರದ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವಾದರಗಳು ಗಗನವನ್ನು ಮುಟ್ಟುತ್ತಿರುತ್ತವೆ. ಆದುದರಿಂದ, ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗಿ ತೆಕ್ಕೆಯಿಂದ ರಕ್ಷಿಸಿ ಅದನ್ನು ಅಭಿವೃದ್ಧಿಗೊಳಿಸುವತ್ತ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಜೊತೆಗೆ ಆಯುಷ್ಮಾನ್ ಭಾರತದ ಆಯಸ್ಸು ಉಳಿಯಬೇಕಾದರೆ ಖಾಸಗಿ ಆಸ್ಪತ್ರೆಗಳು ನಡೆಸುವ ದರೋಡೆಗಳಿಗೆ ಕಣ್ಗಾವಲು ಕೂಡ ಇಡಬೇಕು. ಇಲ್ಲವಾದರೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಗಾದೆಯಂತೆ, ಯಾರದೋ ಕಾಯಿಲೆಗೆ ಇನ್ನಾರೋ ಹಬ್ಬ ಆಚರಿಸುವ ಸ್ಥಿತಿ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News