ಮರಾಠರಿಗೆ ಮೀಸಲಾತಿ ನೀಡಬಹುದಾದರೆ ಪಾಟಿದಾರ್ ಗಳಿಗೇಕಿಲ್ಲ? : ಹಾರ್ದಿಕ್ ಪಟೇಲ್ ಪ್ರಶ್ನೆ

Update: 2018-11-30 06:08 GMT

ಅಹ್ಮದಾಬಾದ್,ನ.30 : ಮರಾಠರಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ 16ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸಿದ ಬೆನ್ನಲ್ಲೇ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಪ್ರತಿಕ್ರಿಯಿಸಿ ಗುಜರಾತ್ ರಾಜ್ಯದ ಬಿಜೆಪಿ ಸರಕಾರವೇಕೆ ತಮ್ಮ ಸಮುದಾಯಕ್ಕೆ ಇದೇ ರೀತಿ ಮೀಸಲಾತಿ ಪ್ರಕಟಿಸಬಾರದು ? ಎಂದು ಪ್ರಶ್ನಿಸಿದ್ದಾರೆ.

ಪಾಟಿದಾರ್ ಸಮುದಾಯ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ ಎಂದು ದೃಢೀಕರಿಸಲು ಮಹಾರಾಷ್ಟ್ರ ಸರಕಾರ ಮರಾಠರಿಗೆ ಸಂಬಂಧಿಸಿದಂತೆ ನಡೆಸಿದ ಸಮೀಕ್ಷೆಯ ಮಾದರಿಯಲ್ಲಿಯೇ ನಡೆಸಬೇಕು ಎಂದು ಅವರು ಆಗ್ರಹಿಸಿದರು.

"ಗುಜರಾತ್ ರಾಜ್ಯದಲ್ಲಿ ಅಂತಹ ಸಮೀಕ್ಷೆ ನಡೆಸಲಾಗಿಲ್ಲ. ಸಮೀಕ್ಷೆ ನಡೆಸಿದರೆ ಪಾಟಿದಾರ್ ಸಮುದಾಯ ಕೂಡ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ ಎಂದು ಸಾಬೀತಾಗುವುದು,'' ಎಂದು ಉತ್ತರ ಗುಜರಾತಿನ ಪಠಾನ್ ಎಂಬಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪಟೇಲ್ ಹೇಳಿದರು.

ಮಹಾರಾಷ್ಟ್ರದ ಬಿಜೆಪಿ ಸರಕಾರ ಮೀಸಲಾತಿ ನೀಡಬಹುದಾದರೆ ಗುಜರಾತ್‍ನಲ್ಲೇಕಿಲ್ಲ ? ಎಂದು ಅವರು ಕೇಳಿದ್ದಾರೆ.

ತರುವಾಯ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿಯ ನಿಯೋಗವೊಂದು ಗುಜರಾತ್ ಒಬಿಸಿ ಆಯೋಗದ ಅಧ್ಯಕ್ಷೆ ಸುಗ್ನಾಬೆನ್ ಭಟ್ಟ್ ಜತೆ ಇನ್ನೊಂದು ಸುತ್ತಿನ ಮಾತುಕತೆಯನ್ನು ಗಾಂಧಿನಗರದಲ್ಲಿ ಗುರುವಾರ ನಡೆಸಿದ್ದಾರೆ.

ತರುವಾಯ ರಾಜಪುತ್ ಸಮುದಾಯದ ಕೆಲ ಮಂದಿ ಕೂಡ ಆಯೋಗವನ್ನು ಸಂಪರ್ಕಿಸಿ ತಮ್ಮ ಸಮುದಾಯ ಕೂಡ ಹಿಂದುಳಿದಿದೆ ಎಂದು ದೃಢೀಕರಿಸಲು ಸಮೀಕ್ಷೆ ನಡೆಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News