ಮಾಧ್ಯಮಗಳು ಜನರಿಗೆ ವಾಸ್ತವ ಅಂಶಗಳನ್ನು ತಿಳಿಸುವ ಕೆಲಸ ಮಾಡಲಿ: ಎಚ್.ಡಿ.ಕುಮಾರಸ್ವಾಮಿ

Update: 2018-12-01 12:53 GMT

ಬೆಂಗಳೂರು, ಡಿ.1: ವೇಗದ ಜಗತ್ತಿನಲ್ಲಿ ಮಾಧ್ಯಮಗಳು ತಾವು ಮೊದಲು ಸುದ್ದಿಯನ್ನು ಬಿತ್ತರಿಸಬೇಕೆಂಬ ಧಾವಂತದಲ್ಲಿ ಇದ್ದರೂ ಈ ಸಮಾಜದ ಅನುಕೂಲಕ್ಕಾಗಿ ವಾಸ್ತವ ಅಂಶಗಳನ್ನು ಜನರಿಗೆ ತಿಳಿಸುವ ಕೆಲಸವಾಗಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ ಅವರ ಅಂಕಣ ಬರಹಗಳ ಸಂಗ್ರಹ ‘ಹೊರಳು ನೋಟ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಯುವಕರು ದುಡ್ಡಿನ ಹಿಂದೆ ಬಿದ್ದು ದಾರಿ ತಪ್ಪುತ್ತಿದ್ದಾರೆ. ಇವರನ್ನು ಸರಿ ದಾರಿಗೆ ತರಲು ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವಾಸ್ತವ ಅಂಶಗಳನ್ನು ಬಿತ್ತರಿಸಬೇಕು. ಇದರಿಂದ, ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಲೆಕ್ಟ್ರಾನಿಕ್ ಮಾಧ್ಯಮಗಳು ಸಿನಿಮಾ ನಟನ ಕುಟುಂಬದಲ್ಲಿ ನಡೆಯುವ ಘಟನೆಗಳನ್ನೂ ಮೂರ್ನಾಲ್ಕು ದಿನಗಳ ಕಾಲ ಪದೇ ಪದೇ ತೋರಿಸಿ ಜನರು ಬೇಸತ್ತು ಹೋಗುವಂತೆ ಮಾಡುತ್ತಾರೆ. ಇದರಿಂದ, ಈ ಸಮಾಜಕ್ಕೆ ಯಾವುದೆ ಲಾಭವಾಗುವುದಿಲ್ಲ. ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರದ ದಿನಗಳ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರು ಲೋಕದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಅವಸರದಲ್ಲಿ ತಪ್ಪು ಸಂದೇಶಗಳನ್ನು ನೀಡುವ ವರದಿಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜನರ ಸಮಸ್ಯೆಗಳನ್ನು ಅರಿಯುವುದಕ್ಕಾಗಿ ಹಾಗೂ ಗಣ್ಯ ವ್ಯಕ್ತಿಗಳ ಹೇಳಿಕೆಗಳನ್ನು ಆಲಿಸುವುದಕ್ಕಾಗಿ ಪ್ರತಿ ದಿನ ಬೆಳಗ್ಗೆ 14 ದಿನ ಪತ್ರಿಕೆಗಳನ್ನು ಓದುತ್ತೇನೆ. ಇದರಿಂದ, ಈ ನಾಡಿನ ಜನತೆಯ ಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಹೈಕೋರ್ಟ್ ಹಿರಿಯ ವಕೀಲ ಶಂಕ್ರಪ್ಪ ಮಾತನಾಡಿ, ದೇಶದಲ್ಲಿ ಕೋಮುವಾದ, ಜಾತಿವಾದ ವಿಜೃಂಭಿಸುತ್ತಿದ್ದು, ಇದರಿಂದ, ಹತ್ಯೆಗಳು ನಡೆಯುತ್ತಿವೆ. ಈ ಎಲ್ಲ ಅನಿಷ್ಟಗಳಿಗೆ ಕಡಿವಾಣ ಹಾಕಲು ನಾವೆಲ್ಲರೂ ಸುಲಭವಾದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.

ಹೊರಳು ನೋಟ ಕೃತಿ ಕುರಿತು ಮಾತನಾಡಿದ ಸಾಹಿತಿ ಡಾ.ಸಿ.ಎನ್.ರಾಮಚಂದ್ರನ್ ಅವರು, ಹೊರಳು ನೋಟ ಕೃತಿಯಲ್ಲಿ ದೇಶದ ಮಾಜಿ ಪ್ರಧಾನಿಗಳು, ದೇಶದ ರಾಜಕೀಯ ಮುಖಂಡರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಸೇರಿದಂತೆ ಇನ್ನಿತರ ಗಣ್ಯ ವ್ಯಕ್ತಿಗಳ ಹಾಗೂ ಈ ನಾಡಿನಲ್ಲಿರುವ ಸಮಸ್ಯೆಗಳ ಬಗ್ಗೆ ಕೃತಿಯಲ್ಲಿ ತಮ್ಮದೆ ಶೈಲಿಯಲ್ಲಿ ಬರೆದು ವಾಸ್ತವಾಂಶವನ್ನು ತಿಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್, ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್, ತಿಮ್ಮಪ್ಪ ಭಟ್, ಮಾಜಿ ಶಾಸಕ ನಂಜಯ್ಯನ ಮಠ ಮತ್ತಿತರರು ಉಪಸ್ಥಿತರಿದ್ದರು. 

ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಅವರು ಬರೆದಿರುವ ಹೊರಳು ನೋಟ ಕೃತಿಯಲ್ಲಿ ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರದ ದಿನಗಳಲ್ಲಿನ ಈ ಸಮಾಜದ ವಾಸ್ತವ ಅಂಶಗಳನ್ನು ಜನರ ಮುಂದೆ ಇಟ್ಟಿದ್ದು, ಈ ಕೃತಿಯನ್ನು ಪ್ರತಿಯೊಬ್ಬರೂ ಓದುವ ಅವಶ್ಯಕತೆ ಇದೆ.

-ಡಾ.ಸಿ.ಎನ್.ರಾಮಚಂದ್ರನ್, ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News