ಮಹಾರಾಷ್ಟ್ರ ಸರ್ಕಾರಕ್ಕೆ ಶಿರಡಿ ಟ್ರಸ್ಟ್‌ನಿಂದ 500 ಕೋಟಿ ರೂ. ಸಾಲ

Update: 2018-12-02 04:04 GMT

ಮುಂಬೈ, ಡಿ.2: ತೀವ್ರ ಹಣಕಾಸು ಮುಗ್ಗಟ್ಟಿನಿಂದ ತತ್ತರಿಸಿರುವ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ, ಅಹ್ಮದ್‌ ನಗರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ನಿಲ್ವಾಂಡೆ ನೀರಾವರಿ ಯೋಜನೆಗಾಗಿ ಶಿರಡಿಯ ಸಾಯಿಬಾಬಾ ಟ್ರಸ್ಟ್‌ನಿಂದ 500 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ಪಡೆಯಲಿದೆ.

ಈ ನೀರಾವರಿ ಯೋಜನೆಗೆ ಸಾಲದ ರೂಪದಲ್ಲಿ ನೆರವು ನೀಡುವಂತೆ ಬಿಜೆಪಿ ಸರ್ಕಾರ ಮಾಡಿಕೊಂಡ ಮನವಿಯ ಆಧಾರದಲ್ಲಿ ಟ್ರಸ್ಟ್ ಅಧ್ಯಕ್ಷ ಸುರೇಶ್ ಹವಾರೆ ಸಾಲ ಮಂಜೂರು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಬಡ್ಡಿರಹಿತವಾಗಿ ನೀಡಿದ ಉದಾಹರಣೆ ಇಲ್ಲ. ಜತೆಗೆ ಹಣ ಮರುಪಾವತಿಗೆ ಯಾವುದೇ ಗಡುವು ಕೂಡಾ ವಿಧಿಸಿಲ್ಲ.

"ಸಾಯಿಬಾಬಾ ದೇಗುಲ ಟ್ರಸ್ಟ್ ಹಾಗೂ ಗೋದಾವರಿ ಮರಾಠವಾಡ ನೀರಾವರಿ ಅಭಿವೃದ್ಧಿ ನಿಗಮ ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿವೆ. ಇದು ದೇವಾಲಯ ಟ್ರಸ್ಟ್‌ನ ಇತಿಹಾಸದಲ್ಲೇ ವಿಶೇಷ ನಿದರ್ಶನ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕಾಮಗಾರಿ ದೀರ್ಘಾವಧಿಯಿಂದ ಬಾಕಿ ಇದೆ. ಯೋಜನೆಯ ಒಟ್ಟು ವೆಚ್ಚ 1,200 ಕೋಟಿ ರೂಪಾಯಿ ಆಗಿದ್ದು, ದೇವಾಲಯ ಟ್ರಸ್ಟ್ 500 ಕೋಟಿ ಬಿಡುಗಡೆ ಮಾಡಲಿದೆ. ಜಲ ಸಂಪನ್ಮೂಲ ಇಲಾಖೆ 300 ಕೋಟಿ ರೂಪಾಯಿ ನಿಗದಿಪಡಿಸಿದ್ದು, ಮುಂದಿನ ಬಜೆಟ್‌ನಲ್ಲಿ ಉಳಿಕೆ 400 ಕೋಟಿ ಮಂಜೂರು ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳು ಪೂರ್ಣಗೊಳ್ಳಲಿವೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News