ಪಾಕ್ ವಿದೇಶಾಂಗ ಸಚಿವರ ‘ಗೂಗ್ಲಿ’ಗೆ ಸುಷ್ಮಾ ಸ್ವರಾಜ್ ಸಿಕ್ಸರ್ ಬಾರಿಸಿದ್ದು ಹೀಗೆ

Update: 2018-12-02 08:11 GMT

ಹೊಸದಿಲ್ಲಿ, ಡಿ.2: ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಶಿಯವರ "ಗೂಗ್ಲಿ" ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಚಿವ ಖುರೇಶಿಯವವರು ಗುರುವಾರ ಹೇಳಿಕೆ ನೀಡಿ, "ಐತಿಹಾಸಿಕ ಕರ್ತಾರ್ ಪುರ ಕಾರಿಡಾರ್‍ ನ ಭೂಮಿಪೂಜೆ ಸಮಾರಂಭದಲ್ಲಿ ಭಾರತ ಸರ್ಕಾರದ ಇರುವಿಕೆ ಖಾತ್ರಿಪಡಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರು ಗೂಗ್ಲಿ ಎಸೆದಿದ್ದಾರೆ" ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, “ಸಿಖ್ ಸಮುದಾಯದ ಭಾವನೆಗಳ ಬಗ್ಗೆ ಖುರೇಶಿ ಹಾಗೂ ಪಾಕಿಸ್ತಾನಕ್ಕೆ ಯಾವ ಗೌರವವೂ ಇಲ್ಲ ಎನ್ನುವುದನ್ನು ಈ ಹೇಳಿಕೆ ದೃಢಪಡಿಸಿದೆ” ಎಂದು ಚುಚ್ಚಿದ್ದಾರೆ.

"ಪಾಕಿಸ್ತಾನದ ವಿದೇಶಾಂಗ ಸಚಿವರೇ, ನಿಮ್ಮ ಗೂಗ್ಲಿ ಹೇಳಿಕೆ ನಾಟಕೀಯ ರೀತಿಯಲ್ಲಿ ಬಹಿರಂಗಪಡಿಸಿದ್ದು ನಿಮ್ಮ ಹುಳುಕನ್ನಲ್ಲದೇ ಬೇರೇನನ್ನೂ ಅಲ್ಲ; ಸಿಖ್ಖರ ಭಾವನೆಗಳಿಗೆ ನಿಮಗೆ ಗೌರವ ಇಲ್ಲ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಗೂಗ್ಲಿಗಳನ್ನು ನೀವಷ್ಟೇ ಆಡಿ" ಎಂದು ಟ್ವಿಟರ್ ಮೂಲಕ ಸುಷ್ಮಾ ತಿರುಗೇಟು ನೀಡಿದ್ದಾರೆ.

"ನಾವು ನಿಮ್ಮ ಗೂಗ್ಲಿ ಬಲೆಗೆ ಬಿದ್ದಿಲ್ಲ ಎನ್ನುವುದನ್ನು ನಾನು ಹೇಳಬಯಸುತ್ತೇನೆ. ನಮ್ಮ ಇಬ್ಬರು ಸಿಖ್ ಸಚಿವರು ಕರ್ತಾರ್‍ಪುರ ಸಾಹಿಬ್‍ಗೆ ತೆರಳಿದ್ದು, ಪವಿತ್ರ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ" ಎಂದು ಸುಷ್ಮಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News