ಬೆಂಗಳೂರು: ಹಾಸ್ಟೆಲ್ ವಾರ್ಡನ್ ಬಳಿ 250 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ; ಎಫ್‌ಐಆರ್ ದಾಖಲು

Update: 2018-12-02 13:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.2: ಬರೋಬ್ಬರಿ 250 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಸರಕಾರಿ ವಸತಿ ನಿಲಯದ ಕಿರಿಯ ವಾರ್ಡನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು, ನ್ಯಾಯಾಲಯದ ಆದೇಶದ ಮೇರೆಗೆ ಎಫ್‌ಐಆರ್ ದಾಖಲು ಮಾಡಿದ್ದಾರೆ ಎನ್ನಲಾಗಿದೆ.

ರಾಮನಗರದ ಕನಕಪುರ ತಾಲೂಕು ಹುಣಸನಹಳ್ಳಿಯ ಹಾಸ್ಟೆಲ್ ನ ಕಿರಿಯ ವಾರ್ಡನ್ ಬಿ.ನಟರಾಜ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿ, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸಿಕ್ಕಿದ್ದು ಹೇಗೆ?: ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಿರಿಯ ವಾರ್ಡನ್ ಆಗಿರುವ ನಟರಾಜ್, ಆದಾಯ ಮೀರಿ ಮಾತ್ರವಲ್ಲದೆ, 250 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಆರ್‌ಟಿಐ ಕಾರ್ಯಕರ್ತ ರವಿಕುಮಾರ್ ಎಂಬವರು ಆರೋಪಿಸಿ ದಾಖಲೆಗಳ ಸಹಿತವಾಗಿ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು ಮಾಡಿದ್ದರು ಎನ್ನಲಾಗಿದೆ.

ದೂರಿನ ಅನ್ವಯ ಪಿಸಿ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆಗೆ ನ್ಯಾಯಾಲಯದ ಆದೇಶ ಮಾಡಿದ ಹಿನ್ನಲೆ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕನಕಪುರ, ಬೆಂಗಳೂರು, ಹಾರೋಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಎಸಗಿ ಸಂಪಾದಿಸಿದ್ದು ತನಿಖೆ ನಡೆಸುವಂತೆ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಯಾರಿದು ವಾರ್ಡನ್?: ನಟರಾಜ್ ಕನಕಪುರದ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇರೆಗೆ ವಾರ್ಡನ್ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲ ವರ್ಷಗಳ ಹಿಂದೆ 7 ಸಾವಿರ ರೂ. ವೇತನ ಪಡೆಯುತ್ತಿದ್ದ ಈತ, ಬಳಿಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಟೆಂಡರ್‌ಗಳನ್ನು ಅಕ್ರಮವಾಗಿ ಪಡೆದು ಕಾಮಗಾರಿ ನಡೆಸಿ ಅಕ್ರಮವಾಗಿ ಬಹುಕೋಟಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News