ಕನ್ನಡ ವಿಶ್ವ ಭಾಷೆಯಾಗಿ ಗುರುತಿಸಿಕೊಳ್ಳುವಲ್ಲಿ ತುಳುವರ ಕಾಣಿಕೆ ದೊಡ್ಡದು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-12-02 13:57 GMT

ಕಾಸರಗೋಡು, ಡಿ.2: ತುಳುವರು ಕನ್ನಡವನ್ನು ಸೀಮಾತೀತವಾಗಿ ಬೆಳೆಸಲು, ಉಳಿಸಲು ಕಾರಣರಾಗಿ ಸಮಸ್ತ ಕನ್ನಡಿಗ ಮನಸ್ಸುಗಳನ್ನು ಗೆದ್ದಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ರವಿವಾರ ಕಾಸರಗೋಡಿನ ಯಡನೀರು ಮಠದ ಆವರಣದಲ್ಲಿ ಕೇರಳ ಗೋವಾ ರಾಜ್ಯಗಳಲ್ಲಿ ಎಸೆಸೆಲ್ಸಿಯನ್ನು ಯನ್ನು ಕನ್ನಡ ಮಾಧ್ಯಮದಲ್ಲಿ ಓದಿ ಶಾಲಾ ಮಟ್ಟದಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ವಿಶ್ವಾತ್ಮಕ ಭಾವವೆನ್ನುವುದು ಕನ್ನಡಿಗರ ಪ್ರಾಣದ್ರವ್ಯವಾಗಿದ್ದು, ಮನುಷ್ಯ ಜಾತಿ ತಾನೊಂದೇ ವಲಂ ಎಂದ ಪಂಪನಿಂದ ಕುವೆಂಪುರವರು ಪ್ರತಿಪಾದಿಸಿದ ವಿಶ್ವಮಾನವತೆಯಲ್ಲಿ ಅರಳಿರುವ ಈ ಭಾವ ಕನ್ನಡಿಗರ ಮೂಲ ಪ್ರಜ್ಞೆಯಾಗಿದೆ. ಭಾಷಾಂಧತೆ, ಏಕಭಾಷಾ ಹೇರಿಕೆಯಂತಹ ಕೇಂದ್ರದ ಒಕ್ಕೂಟವಿರೋಧಿ ನಿಲುವುಗಳ ಸಂದರ್ಭಗಳಲ್ಲಿ ಕನ್ನಡತನವೆನ್ನುವುದು ಇಡೀ ನಾಗರಿಕ ಸಮಾಜಕ್ಕೆ, ದೇಶಕ್ಕೆ ಮಾದರಿಯಂತಿದೆ ಎಂದು ಅವರು ಅಭಿಮಾನಪಟ್ಟರು. ಕರ್ನಾಟಕ ಸರಕಾರ ವಿಶ್ವಾತ್ಮಕತೆಯ ನೆಲೆಗಟ್ಟಿನಲ್ಲಿಯೇ ತನ್ನ ಭಾಷಾಪರ ನಿಲುವುಗಳನ್ನು ಹೊಂದಿದ್ದು, ಅದು ತನ್ನ ನೆಲದಲ್ಲಿನ ಕೊಂಕಣಿ, ಬ್ಯಾರಿ, ತುಳು ಸೇರಿದಂತೆ ಎಲ್ಲ ಸೋದರ ಭಾಷೆಗಳ ಪೋಷಣೆಗೆ ಸ್ಥಾಪಿಸಿರುವ ಅಕಾಡೆಮಿಗಳು, ದೇಶಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರಿಗೆ ಸರಕಾರಿ ಉದ್ಯೋಗದಲ್ಲಿ ನೀಡಿರುವ ವಿಶೇಷ ಮೀಸಲಾತಿಗಳು, ಸೌಲಭ್ಯಗಳ ವಿಸ್ತರಣೆಗಳೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಕನ್ನಡದ ಮಿಡಿತವನ್ನು ಜೀವಂತವಾಗಿಟ್ಟಿರುವ ಕಾಸರಗೋಡು ಪ್ರದೇಶದ ಕನ್ನಡಿಗರು, ಭಾಷಾ ಪ್ರೇಮಕ್ಕೆ ಪರ್ಯಾಯವಾದ ಎಡನೀರು ಮಠದ ಪೂಜ್ಯ ಕೇಶವಾನಂದ ಭಾರತೀ ಪಾದಂಗಳವರು ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದಲ್ಲಿ ಕೇರಳ, ಗೋವಾ ಪ್ರದೇಶದ ಒಟ್ಟು 106 ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 12 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 11 ಸಾವಿರ ರೂ., ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ವಿತರಿಸಲಾಯಿತು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಸ್ಥಳೀಯ ಶಾಸಕರಾದ ನೆಲ್ಲಿಕುನ್ನು, ಉದುಮ ಕ್ಷೇತ್ರದ ಶಾಸಕ ಕುಞಿರಾಮನ್, ಯಕ್ಷಗಾನ ಬಯಲಾಟ ಅಕ್ಯಾಡೆಮಿಯ ಸದಸ್ಯ ದಾಮೋದರ ಶೆಟ್ಟಿ, ಗೋವಾ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ, ಗೋವಾ ಕನ್ನ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಾದಾಮಿ, ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News