ಮಂದಿರ ನಿರ್ಮಾಣಕ್ಕೆ ನ್ಯಾಯಾಲಯದ ಮೊಹರು ಬೇಕಿಲ್ಲ: ವಿಎಚ್‌ಪಿ ನಾಯಕ ಮಿಲಿಂದ್ ಪರಾಂಡೆ

Update: 2018-12-02 15:39 GMT

ಬೆಂಗಳೂರು, ನ.2: ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ತೀರ್ಮಾನ ಕೈಗೊಳ್ಳುತ್ತಿಲ್ಲ. ಹೀಗಾಗಿ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯದ ಮೊಹರು ಬೇಕಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.

ರವಿವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದ ತಡೆಗೆ ಕೆಲವು ಪ್ರಭಾವಿಗಳು ಷಡ್ಯಂತ್ರಗಳು ರೂಪಿಸುತ್ತಿದ್ದಾರೆ. ಆದರೂ, ಈ ಭಾರಿ ರಾಮಮಂದಿರ ಕಟ್ಟದೆ ವಿರಮಿಸುವುದಿಲ್ಲವೆಂದು ತಿಳಿಸಿದರು.

ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮಿಜಿ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಬಹಳ ಅಡಚಣೆಗಳು ಬರುತ್ತಿವೆ. ದೇಶದಲ್ಲಿ ಹಲವು ಮಂದಿರಗಳು ನಿರ್ಮಾಣವಾಗುತ್ತಿವೆ. ಆದರೆ, ದೇಶದ ಎಲ್ಲರೂ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಹಾಕುತ್ತಿದ್ದರು ಅಡಚಣೆಯಾಗುತ್ತಿದೆ. ಈಗ ರಾಮ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಕಾಲ ಸನ್ನಿಹಿತವಾಗಿದ್ದು, ಮಂದಿರಕ್ಕೆ ಇನ್ಮುಂದೆ ವಿಳಂಬವಾಗಬಾರದು ಎಂದು ಹೇಳಿದರು.

ಸಮಾವೇಶಕ್ಕೆ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಆರೆಸ್ಸೆಸ್ ಮುಖಂಡರು ಹಾಗೂ ಬೆಂಗಳೂರು, ರಾಮನಗರ, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು.

ಸಮಾವೇಶಕ್ಕೂ ಮುನ್ನ ನಗರದಲ್ಲಿ ರಾಮ ಮತ್ತು ಹನುಮಂತನ ಬೃಹತ್ ಪ್ರತಿಮೆಗಳ ರಥಯಾತ್ರೆ ಮಾಡಲಾಯಿತು. ರಾಮಜನ್ಮಭೂಮಿ ಇತಿಹಾಸ ಸಾರುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಸಮಾವೇಶದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನ್ಯಾಯಾಧೀಶರಿಗೆ ರಾಮಮಂದಿರ ನಿರ್ಮಾಣದ ವಿಚಾರ ಆಧ್ಯತೆ ಅನಿಸುತ್ತಿಲ್ಲ. ಇದು ಹಿಂದೂಗಳಿಗೆ ಮಾಡಿದ ಅವಮಾನ. ಶ್ರೀರಾಮ ರಾಷ್ಟ್ರ ದೇವರಾಗಿದ್ದು, ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಹೀಗಾಗಿ ಕ್ರಿಶ್ಚಿಯನ್, ಮುಸ್ಲಿಮರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಬೇಕು. ನ್ಯಾಯಾಲಯ ಹಾಗೂ ಕೇಂದ್ರ ಸರಕಾರ ಮಂದಿರ ನಿರ್ಮಾಣಕ್ಕೆ ಬೆಂಬಲಿಸದಿದ್ದರೂ ಸಂತರು, ಆರೆಸ್ಸೆಸ್ ಕಾರ್ಯಕರ್ತರ ನೆರವಿನಿಂದ ಮಂದಿರ ಕಟ್ಟದೆ ವಿರಮಿಸದಿರೋಣ.

-ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News