ಬೆಂಗಳೂರು: ಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಧರಣಿ 41ನೆ ದಿನಕ್ಕೆ

Update: 2018-12-02 15:54 GMT

ಬೆಂಗಳೂರು, ಡಿ.2: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಎಲ್ಲ ಸಿಬ್ಬಂದಿ ವರ್ಗದವರಿಗೆ ದಿನ ಭ್ಯತೆ ಹಾಗೂ ಇನ್ನಿತರೆ ಭತ್ಯೆಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 41ನೆ ದಿನಕ್ಕೆ ಮುಟ್ಟಿದೆ.

ಕಳೆದ ಅಕ್ಟೋಬರ್ 1ರಿಂದ ನಗರದ ಕೆ.ಎಚ್ ರಸ್ತೆಯಲ್ಲಿರುವ ಸಾರಿಗೆ ಭವನದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಧರಣಿ 41ಕ್ಕೆ ಮುಟ್ಟಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲವೆಂದು ಮಂಡಳಿಯ ಕಾರ್ಯಾಧ್ಯಕ್ಷ ಎ.ಎಸ್.ರಾಮಣ್ಣ ಹೇಳಿದ್ದಾರೆ.

ಪ್ರಮುಖ ಬೇಡಿಕೆಗಳು: ಕೆಎಸ್ಸಾರ್ಟಿಸಿ ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರಿಗೆ ವೈದ್ಯಕೀಯ ಭತ್ಯೆ ತಿಂಗಳಿಗೆ 10ಸಾವಿರ ರೂ.ನೀಡುವುದು. ರಾಜ್ಯ ಸರಕಾರದಲ್ಲಿರುವ ಪಿಂಚಣಿ ಯೋಜನೆಯನ್ನು ಸಾರಿಗೆ ಸಂಸ್ಥೆ ಎಲ್ಲ ಕಾರ್ಮಿಕರಿಗೂ ಜಾರಿಗೆ ತರುವುದು. ಎನ್‌ಐಎನ್‌ಸಿ ಪ್ರಕರಣಗಳಲ್ಲಿ ಚಾಲಕ ಕಂ ನಿರ್ವಾಹಕ, ನಿರ್ವಾಹಕರಿಗೆ ಶಿಕ್ಷೆ ವಿಧಿಸಬಾರದು.

ನಿಗಮದಿಂದ ನಿಗಮಕ್ಕೆ ವರ್ಗಾವಣೆಗೊಂಡಿರುವ ಕಾರ್ಮಿಕರನ್ನು ಅವರು ಕೋರಿರುವ ಸ್ಥಳಗಳಿಗೆ ಶೀಘ್ರ ವರ್ಗಾವಣೆಗೊಳಿಸುವುದು. ಹಾಗೂ ಮುಂದಿನ ದಿನಗಳಲ್ಲಿ ಕಾರ್ಮಿಕರು ಕೋರುವ ಕಡೆಗೆ ವರ್ಗಾವಣೆ ಮಾಡುವುದು. 15ವರ್ಷಗಳ ಸೇವೆ ಸಲ್ಲಿಸಿರುವ ಎಲ್ಲ ಕಾರ್ಮಿಕರಿಗೂ ಮುಂಬಡ್ತಿ ಸೌಲಭ್ಯವನ್ನು ಜಾರಿಗೆ ತರುವುದು. ಎಲ್ಲ ತರಬೇತಿ ಕಾರ್ಮಿಕರ, ತರಬೇತಿ ಕಾಲಾವಧಿಯನ್ನು 2ವರ್ಷಗಳಿಂದ 6ತಿಂಗಳಿಗೆ ಇಳಿಸಿ, ತರಬೇತಿ ಅವಧಿ ಮುಗಿದ ತಕ್ಷಣ ಖಾಯಂಗೊಳಿಸುವುದು.

ರಾಜ್ಯ ಸರಕಾರ ಜಾರಿಗೊಳಿಸಿರುವ 6ನೆ ವೇತನ ಪರಿಷ್ಕರಣೆಯನ್ನು 4ನಿಗಮಗಳ ಕಾರ್ಮಿಕರಿಗೆ 1981ರ ಕೈಗಾರಿಕಾ ಒಪ್ಪಂದದಂತೆ ತಕ್ಷಣ ಜಾರಿ ಗೊಳಿಸುವುದು ಹಾಗೂ ಮುಂದಿನ ವೇತನ ಶ್ರೇಣಿಗೆ ಪರಿಷ್ಕರಿಸುವುದು. ಹಾಗೂ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತರುತ್ತಿರುವ ಕರಾಳ ಮೋಟಾರು ವಾಹನ ಕಾಯ್ದೆ-2017ನ್ನು ಜಾರಿಗೊಳಿಸಬಾರದು ಎಂದು ಪ್ರಕಟನೆಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News