ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತು ಜಾಗೃತಿ: ಬೆಳಗಾವಿಯಿಂದ-ಬೆಂಗಳೂರಿಗೆ ಡಿ.5ಕ್ಕೆ ಸೈಕಲ್ ರ‍್ಯಾಲಿ

Update: 2018-12-02 16:00 GMT

ಬೆಂಗಳೂರು, ಡಿ.2: ಉಮೀದ್ ಸಾವಿರ ಸೈಕ್ಲೊಥಾನ್ ಮತ್ತು ಮಹಿಳೆ-ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಸಹಯೋಗದಲ್ಲಿ ರಾಜ್ಯ ಮಹಿಳಾ ಪೊಲೀಸ್ ಇಲಾಖೆ ಡಿ.5ರಿಂದ ಐದು ದಿನ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎರ್ಸಾಪಿ ಎಡಿಜಿಪಿ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ‍್ಯಾಲಿಯಲ್ಲಿ ಒಟ್ಟು 100ಮಂದಿ ಮಹಿಳೆಯರು ಭಾಗವಹಿಸಲಿದ್ದು, ಈ ಪೈಕಿ 50 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ, 10 ಮಂದಿ ಮಹಿಳಾ ಐಎಎಸ್, ಐಪಿಎಸ್, ಕೆಎಎಸ್ ಮತ್ತು ಕೆಎಸ್ಪಿಎಸ್ ಅಧಿಕಾರಿಗಳು ಹಾಗೂ ಇತರೆ ಸಂಘ ಸಂಸ್ಥೆಗಳಿಂದ 40 ಮಂದಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ಡಿ.4ರಂದು ಎಲ್ಲ ಸೈಕಲಿಸ್ಟ್‌ಗಳು ಬೆಳಗಾವಿಯಲ್ಲಿ ಒಂದೆಡೆ ಸೇರಲಿದ್ದಾರೆ. ಬಳಿಕ ಡಿ.5ಕ್ಕೆ ಆರಂಭವಾಗುವ ರ‍್ಯಾಲಿ ಬೆಳಗಾವಿಯಿಂದ-ಹುಬ್ಬಳ್ಳಿ, 6ರಂದು ಹುಬ್ಬಳಿಯಿಂದ-ರಾಣಿಬೆನ್ನೂರು, 7ರಂದು ರಾಣಿಬೆನ್ನೂರಿನಿಂದ-ಚಿತ್ರದುರ್ಗ, 8ರಂದು ಚಿತ್ರದುರ್ಗದಿಂದ-ತುಮಕೂರು ಹಾಗೂ 9ರಂದು ತುಮಕೂರಿನಿಂದ-ಬೆಂಗಳೂರಿಗೆ ಬಂದು ತಲುಪಲಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವಚ್ಛ ಭಾರತ್, ವೃಕ್ಷಾರೋಹಣ, ಬಾಲ್ಯ ವಿವಾಹ ಪದ್ಧಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ, ಮಹಿಳಾ ನೈರ್ಮಲೀಕರಣ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಪ್ರಮುಖವಾಗಿ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿಗೆ ಹೆಚ್ಚು ಆದ್ಯತೆ ನೀಡುವುದು ರ‍್ಯಾಲಿಯ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರತಿದಿನ 100 ಕಿ.ಮೀ ರ‍್ಯಾಲಿ ಸಾಗಲಿದೆ. ಒಟ್ಟು 540 ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್ ರ‍್ಯಾಲಿ ನಡೆಯಲಿದ್ದು, ಮಹಿಳೆಯರ ಸುರಕ್ಷತೆ ಮಾತ್ರವಲ್ಲದೆ, ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು. ರ‍್ಯಾಲಿ ಸಾಗುವ ಮಾರ್ಗದಲ್ಲಿನ ಸರಕಾರಿ ಮಹಿಳಾ ಕಾಲೇಜು, ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಸೈಕಲ್ ರ‍್ಯಾಲಿ ಆಯೋಜನೆ ಸಮಿತಿ ಅಧ್ಯಕ್ಷ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ರ‍್ಯಾಲಿಯ ಮಾರ್ಗದ ಮಧ್ಯೆ ಸರಕಾರಿ ಮಹಿಳಾ ಕಾಲೇಜು ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಾಗುವುದು. ಡಿ.9ರಂದು ವಿಧಾನಸೌಧಕ್ಕೆ ರ‍್ಯಾಲಿ ತಲುಪಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮೇಯರ್ ಗಂಗಾಂಬಿಕೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಭಾಸ್ಕರ್ ರಾವ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಯ್ದಿಟ್ಟ ಪೊಲೀಸ್ ಪಡೆಯ ಪೊಲೀಸರು ಕರ್ತವ್ಯ ನಿರ್ವಹಿಸುವ ವಿಶೇಷ ಸಂದರ್ಭಗಳಲ್ಲಿ ಮಹಿಳಾ ಸಿಬ್ಬಂದಿಗಳು, ಎಲ್ಲಾ ಪೊಲೀಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ ಎರಡು ಯುನಿಟ್ ಸಂಚಾರಿ(ಎಂಟು) ಶೌಚಾಲಯಗಳನ್ನು ಎ.ಸಿ.ಟಿ. ಸಂಸ್ಥೆಯ ಅಧಿಕಾರಿ ಸುನಿಲ್ ಯಜಮಾನ್ ಪೊಲೀಸ್ ಇಲಾಖೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಭಾಸ್ಕರ್‌ರಾವ್ ಅವರು ಮೊಬೈಲ್ ಶೌಚಾಲಯ ಸ್ವೀಕರಿಸಿ, ವಿಶೇಷ ಸಂದರ್ಭಗಳಲ್ಲಿ ಮಹಿಳಾ ಸಿಬ್ಬಂದಿಗಳು, ಎಲ್ಲ ಪೊಲೀಸ್ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ ಎಂದರು. ಕೆಎರ್ಸಾಪಿ ಡಿಐಜಿ ಸತೀಶ್ ಕುಮಾರ್, ಎಸಿಟಿ ಸಂಸ್ಥೆಯ ಅಧಿಕಾರಿ ಸುನಿಲ್ ಯಜಮಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News