ಬಾಬರಿ ಮಸೀದಿ ಧ್ವಂಸವಾದ ಸ್ಥಳದಲ್ಲೆ ಸುಳ್ಳು ಚರಿತ್ರೆ ಸೃಷ್ಟಿಸಲಾಗುತ್ತಿದೆ: ಪ್ರೊ.ಕೆ.ವಿ.ನಾರಾಯಣ್

Update: 2018-12-02 16:15 GMT

ಬೆಂಗಳೂರು, ಡಿ.2: ಬಾಬರಿ ಮಸೀದಿ ಧ್ವಂಸವಾದ ನಂತರ ಆ ಪ್ರದೇಶದಲ್ಲಿ ನಡೆಸಿರುವ ಉತ್ಖನಗಳ ಮೂಲಕ ಸುಳ್ಳು ಚರಿತ್ರೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ವಿದ್ವಾಂಸ ಪ್ರೊ.ಕೆ.ವಿ.ನಾರಾಯಣ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಸಮುದಾಯ ರಂಗ ಸಂಸ್ಥೆಯ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ವೈ. ನಾರಾಯಣಸ್ವಾಮಿ ರಚನೆಯ ‘ಪಂಪಭಾರತ’ ನಾಟಕದ 100 ಪ್ರದರ್ಶನದ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ವಾಸ್ತವ ಚರಿತ್ರೆಗಳ ಜತೆಗೆ ಸುಳ್ಳು ಚರಿತ್ರೆಗಳು 1991ರ ಬಾಬರಿ ಮಸೀದಿ ಧ್ವಂಸದ ನಂತರ ಸೇರಿಕೊಳ್ಳುತ್ತಿವೆ ಎಂದು ವಿಷಾದಿಸಿದರು.

ಪಂಪಾಭಾರತ ಶ್ರೇಷ್ಟ ಕೃತಿಗಳಲ್ಲೊಂದು: ಕೃತಿಕಾರ ತಾನು ಚಿತ್ರಿಸಿದ ಪಾತ್ರಗಳ ಬಗ್ಗೆ ಸದಾ ಸಂದೇಹದಿಂದ ಕಾಣುತ್ತಿರಬೇಕು. ಕೃತಿಯಲ್ಲಿರುವ ಪ್ರತಿ ಪಾತ್ರವು ತಾನು ಚಿತ್ರಸುವುದಕ್ಕಿಂತ ಭಿನ್ನ ನೆಲೆಯನ್ನು ಹೊಂದಿರುತ್ತದೆ ಎಂಬ ಅಭಿಪ್ರಾಯವನ್ನು ಹೊಂದಿರುವವರು ಶ್ರೇಷ್ಟ ಕೃತಿಕಾರರಾಗಿರುತ್ತಾನೆ. ಆ ರೀತಿಯಲ್ಲಿ ನೊಡುವುದಾದರೆ ಪಂಪಾಭಾರತ ಕೃತಿಯನ್ನು ರಚಿಸಿರುವ ಕೆ.ವೈ.ನಾರಾಯಣಸ್ವಾಮಿ ಉತ್ತಮ ಕೃತಿಕಾರರಲ್ಲಿ ಒಬ್ಬರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ಉತ್ತಮ ಕೃತಿಯನ್ನು ಓದುತ್ತಿರುವ ಸಂದರ್ಭದಲ್ಲೆ ನಮ್ಮ ಮನಸಿನಲ್ಲಿ ಹಲವು ಭಾವನೆಗಳನ್ನು ಉದ್ಧೀಪಿಸುತ್ತಿರಬೇಕು. ಹಾಗೂ ವರ್ತಮಾನದ ಸಂಗತಿಗಳ ಜತೆಗೆ ನೇರವಾಗಿ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗಬೇಕು. ಆ ರೀತಿಯಲ್ಲಿ ಕೆ.ವೈ. ನಾರಾಯಣಸ್ವಾಮಿರವರ ‘ಪಂಪಭಾರತ’ ಕೃತಿಯು ನಮ್ಮ ಸುತ್ತಮುತ್ತಲಿನ ಕತನಗಳಿಗೆ ಮುಖಾಮುಖಿಯಾಗಿಸಲು ಸಾಧ್ಯವಾಗಿಸುತ್ತದೆ ಎಂದು ಅವರು ಹೇಳಿದರು.

ಲೇಖಕ ಶ್ರೀಪಾದ್ ಭಟ್ ಮಾತನಾಡಿ, ಇತ್ತೀಚಿನ ರಂಗ ನಿರ್ದೇಶಕರು ತಾತ್ವಿಕ ಜಿಜ್ಞಾಸೆಗಳನ್ನು ರಂಗರೂಪಕ್ಕೆ ತರುವುದಕ್ಕೆ ಹೆದರುತ್ತಿದ್ದಾರೆ. ನಾವು ಯಾವುದೆ ರಾಜಕೀಯ ಪರವಾಗಿಲ್ಲ ಎನ್ನುವುದನ್ನೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದು ರಂಗಭೂಮಿಯನ್ನು ವಾಸ್ತವದಿಂದ ದೂರ ತಳ್ಳುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಹಿರಿಯ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ತಮ್ಮ ಪಂಪಭಾರತ ನಾಟಕದ ಮೂಲಕ ನೆಲಮೂಲದ ಹುಡುಕಾಟ ನಡೆಸುತ್ತಿದ್ದಾರೆ. 10ನೆ ಶತಮಾನದ ಶ್ರೇಷ್ಠ ಕೃತಿಯೊಂದನ್ನು 21ನೆ ಶತಮಾನದ ವಾಸ್ತವಿಕತೆಗೆ ಮುಖಾಮುಖಿಯಾಗಿಸಿರುವುದು ಉತ್ತಮ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ .ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಪಂಪ ಭಾರತವು ನೈತಿಕ ತಿಳಿವಳಿಕೆ ಕಲಿಸಿಕೊಡಲಿದೆ. ಪಂಪನ ಸಾವಿನಿಂದ ಆರಂಭವಾಗಿ ಪಂಪನ ವರ್ತನೆ, ಮಾನವ ಸಂಬಂಧ, ರಾಜಕೀಯ ಹುನ್ನಾರಗಳನ್ನು ತಿಳಿಸುತ್ತಾ ಸಾಗುತ್ತದೆ ಎಂದರು.

ಈ ವೇಳೆ ಸಮುದಾಯದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ, ನಾಟಕಕಾರ ಕೆ.ವೈ. ನಾರಾಯಣಸ್ವಾಮಿ, ಕನ್ನಡ ಪ್ರಾಧ್ಯಾಪಕಿ ಡಾ.ಎಚ್. ಎಲ್. ಪುಷ್ಪಾ, ಪ್ರಾಧ್ಯಾಪಕ ವಿಕ್ರಂ ವಿಸಾಜಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News