ಜೆಟ್ ಏರ್‌ವೇಸ್ ಪೈಲಟ್‌ಗಳ ಸಾಮೂಹಿಕ ರಜೆ: 14 ವಿಮಾನ ಹಾರಾಟ ಸ್ಥಗಿತ

Update: 2018-12-03 05:05 GMT

ಹೊಸದಿಲ್ಲಿ, ಡಿ.3: ವೇತನ ಬಾಕಿ ಇರಿಸಿದ್ದನ್ನು ಖಂಡಿಸಿ ಕೆಲವು ಪೈಲಟ್‌ಗಳು ಅನಾರೋಗ್ಯ ಕಾರಣ ನೀಡಿ ಸಾಮೂಹಿಕ ರಜೆ ಮೇಲೆ ತೆರಳಿದ ಹಿನ್ನೆಲೆಯಲ್ಲಿ ರವಿವಾರ ಜೆಟ್ ಏರ್‌ವೇಸ್ ವಿವಿಧ ಪ್ರದೇಶಗಳಿಗೆ ತೆರಳಬೇಕಾಗಿದ್ದ ಕನಿಷ್ಠ 14 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ನಷ್ಟದಲ್ಲಿರುವ ಖಾಸಗಿ ವಿಮಾನ ಕಂಪೆನಿ ಜೆಟ್ ಏರ್‌ವೇಸ್ ಕಳೆದ ಆಗಸ್ಟ್‌ನಿಂದ ತೀವ್ರ ನಗದು ಬಿಕ್ಕಟ್ಟು ಎದುರಿಸುತ್ತಿದ್ದು, ಪೈಲಟ್‌ಗಳು ಹಾಗೂ ಇಂಜಿನಿಯರ್‌ಗಳು ಸಹಿತ ಮ್ಯಾನೇಜ್‌ಮೆಂಟ್‌ನ ಹಿರಿಯ ಉದ್ಯೋಗಿಗಳಿಗೆ ಸರಿಯಾದ ವೇತನವನ್ನು ಪಾವತಿಸಿಲ್ಲ.

ಏರ್‌ಲೈನ್ ಸೆಪ್ಟಂಬರ್‌ನಲ್ಲಿ ತನ್ನ ಸಿಬ್ಬಂದಿಗೆ ಭಾಗಶಃ ವೇತನ ಪಾವತಿಸಿತ್ತು. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸ್ವಲ್ಪವೂ ವೇತನವನ್ನು ಪಾವತಿಸಿಲ್ಲ.

‘‘ಕೆಲವು ಪೈಲಟ್‌ಗಳು ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿದ್ದಾರೆ. ಹೀಗಾಗಿ ವಿವಿಧ ಕಡೆಗಳಿಗೆ ತೆರಳಬೇಕಾಗಿರುವ 14 ವಿಮಾನಗಳನ್ನು ರದ್ದುಪಡಿಸಲಾಗಿದೆ. ಪೈಲಟ್‌ಗಳು ವೇತನ ಪಾವತಿ ಮಾಡದ್ದನ್ನು ಖಂಡಿಸಿ, 1,000ಕ್ಕೂ ಅಧಿಕ ಪೈಲಟ್‌ಗಳ ಸದಸ್ಯತ್ವ ಹೊಂದಿರುವ ಜೆಟ್ ಏರ್‌ವೇಸ್‌ನ ಖಾಸಗಿ ಪೈಲಟ್‌ಗಳ ಸಂಘಟನೆ ನ್ಯಾಶನಲ್ ಏವಿಯೇಟರ್ ಗಿಲ್ಡ್(ಎನ್‌ಎಜಿ)ಈ ವಿಚಾರವನ್ನು ಆಡಳಿತ ಮಂಡಳಿ ಗಮನಕ್ಕೆ ತಾರದೇ ಇರುವುದಕ್ಕೆ ಪೈಲಟ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ’’ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News