ಬುಲಂದ್‍ಶಹರ್ ಘಟನೆಯ ಹಿಂದೆ ದೊಡ್ಡ ಸಂಚಿದೆ ಎಂದ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ

Update: 2018-12-05 10:39 GMT

ಲಕ್ನೋ, ಡಿ.5: ಸೋಮವಾರ ಬುಲಂದ್‍ಶಹರ್ ಗ್ರಾಮದಲ್ಲಿ ಗೋಹತ್ಯೆ ನಡೆದಿದೆ ಎಂಬ ವದಂತಿಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ತೆರಳಿದ್ದ ಪೊಲೀಸ್ ಪಡೆಯಲ್ಲಿದ್ದ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ಹಲ್ಲೆಗೈದು ಗುಂಡಿಕ್ಕಿ ಸಾಯಿಸಿದ ಘಟನೆ ಒಂದು ‘ದೊಡ್ಡ ಸಂಚು’ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.

``ಇದು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಿಲ್ಲ. ದನದ ಕಳೇಬರ ಅಲ್ಲಿಗೆ ಹೇಗೆ ತಲುಪಿತು ?, ಯಾರು ತಂದರು ಮತ್ತು ಏಕೆ?'' ಎಂದು ಸಿಂಗ್ ಪ್ರಶ್ನಿಸಿದರು.

ಎಲ್ಲಿಂದಲೋ ಸತ್ತ ದನವನ್ನು ತಂದು ಇಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಲು ಯತ್ನಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್, ದನ ಸತ್ತು ಎಷ್ಟು ಸಮಯವಾಗಿದೆ ಎಂದು ಪರಿಶೀಲಿಸಲಾಗುವುದು ಎಂದಿದ್ದಾರೆ.  ಸಂಚು ನಡೆದಿತ್ತೆಂದಾದರೆ ಅದು ತನಿಖೆಯ ವೇಳೆ ಹೊರಬರುವುದು ಎಂದು ಅವರು ಹೇಳಿದರು.

ಬಜರಂಗದಳ ಸದಸ್ಯ ಯೋಗೇಶ್ ರಾಜ್  ಈ ಪ್ರಕರಣದ ಪ್ರಮುಖ ಶಂಕಿತನಾಗಿದ್ದು ಪೊಲೀಸರಿಗೆ ಮೊದಲು ಕರೆ ಮಾಡಿದವ ಅವನೇ ಆಗಿದ್ದ. ತನ್ನ ದೂರಿನಲ್ಲಿ ಆತ 11 ಹಾಗೂ 12 ವರ್ಷದ ಇಬ್ಬರು ಬಾಲಕರು, ಗ್ರಾಮದಲ್ಲಿ ಹತ್ತು ವರ್ಷಗಳಿಂದ ವಾಸಿಸದೇ ಇದ್ದ ವ್ಯಕ್ತಿಯೊಬ್ಬ ಹಾಗೂ ಇತರ ಮೂವರು ಅನಾಮಿಕರನ್ನು ದೂರಿದ್ದ.

ಇತ್ತೀಚೆಗೆ ನಡೆದ ಎರಡು ಗೋಹತ್ಯೆಯ ಘಟನೆಗಳಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು ಎಂದು ಬುಲಂದ್‍ ಶಹರ್ ಬಿಜೆಪಿ ಶಾಸಕ ಭೋಲಾ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News