ಜನಾಗ್ರಹವಲ್ಲ ದುರಾಗ್ರಹ

Update: 2018-12-05 18:35 GMT

ಅಯೋಧ್ಯೆಯ ಬಾಬರಿ ಮಸೀದಿಯನ್ನು ಸಂಘಪರಿವಾರದ ಕರಸೇವಕರು ನೆಲಸಮಗೊಳಿಸಿ ಇಂದಿಗೆ ಇಪ್ಪತ್ತಾರು ವರ್ಷಗಳಾದವು. ಅಂದು ಒಡೆದು ಹೋದ ಭಾರತಿಯರ ಮನಸ್ಸು ಇನ್ನೂ ಒಂದುಗೂಡಿಲ್ಲ. ಒಂದುಗೂಡಲು ಮಸೀದಿ ಕೆಡವಿದವರು ಬಿಡುತ್ತಿಲ್ಲ. ಪ್ರತೀ ಚುನಾವಣೆಯಲ್ಲಿ ವೋಟಿನ ಬೆಳೆ ತೆಗೆಯಲು ಅಯೋಧ್ಯೆ ವಿವಾದ ಬಳಕೆಯಾಗುತ್ತಿದ್ದರೂ ಅಲ್ಲಿ ಮಂದಿರ ನಿರ್ಮಿಸಲು ಸಂಘ ಪರಿವಾರಕ್ಕೆ ಈ ವರೆಗೆ ಸಾಧ್ಯವಾಗಿಲ್ಲ. ಸಾಧ್ಯವಾಗಿಲ್ಲ ಅನ್ನುವುದಕ್ಕಿಂತ ಸಾಧ್ಯವಾಗಿಸುವ ಮನಸ್ಸು ಅವರಿಗೆ ಇಲ್ಲ. ಅವರಿಗೆ ಬೇಕಾಗಿದ್ದು ಮಂದಿರವಲ್ಲ. ಅದನ್ನು ರಾಜಕಾರಣಕ್ಕೆ ಬಳಸಿಕೊಂಡು ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಿ ಆ ಮೂಲಕ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ರಹದಾರಿ ಕಲ್ಪಿಸುವುದು ಇವರ ಉದ್ದೇಶವಾಗಿದೆ. 1992ರ ಡಿಸೆಂಬರ್ 6 ರಂದು ಬಾಬರಿ ಮಸೀದಿ ಕೆಡವಿದ ಘಟನೆ ಬರೀ ಒಂದು ಕಟ್ಟಡದ ನೆಲಸಮವಾಗಿರಲಿಲ್ಲ, ಅದು ಭಾರತದ ಸಂವಿಧಾನದ ಶವಪೆಟ್ಟಿಗೆಗೆ ಹೊಡೆದ ಮೊದಲ ಮೊಳೆಯಾಗಿತ್ತು. ಸಂವಿಧಾನವನ್ನು ಧಿಕ್ಕರಿಸುವ ಪ್ರಕ್ರಿಯೆಗೆ ಅಂದೇ ನಾಂದಿ ಹಾಡಲಾಯಿತು.

ಕರಸೇವಕರಿಂದ ಬಾಬರಿ ಮಸೀದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಪೊಲೀಸರ ಸರ್ಪಗಾವಲಿನಲ್ಲೇ ಹಾಡಹಗಲೇ ಮಸೀದಿಯನ್ನು ಇಪ್ಪತ್ತು ನಿಮಿಷಗಳಲ್ಲಿ ನೆಲಸಮಗೊಳಿಸಲಾಯಿತು. ಇದಕ್ಕೆ ಅಂದಿನ ಪ್ರಧಾನಿ ಪಿ. ವಿ. ನರಸಿಂಹರಾವ್ ಮೌನ ಸಮ್ಮತಿ ಇತ್ತೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಮಾಡಿ ರಕ್ತಪಾತಕ್ಕೆ ಕಾರಣರಾದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮನೆಸೇರಿದರು. ಗುಜರಾತ್ ಹತ್ಯಾಕಾಂಡದ ಅಪಖ್ಯಾತಿಯನ್ನು ಮುಡಿಗೇರಿಸಿಕೊಂಡ ನರೇಂದ್ರ ಮೋದಿ ಈಗ ಪ್ರಧಾನಿಯಾಗಿದ್ದಾರೆ. ಮತ್ತೆ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಯಾತ್ರೆಯೆಂಬ ಪ್ರಚೋದನಾಕಾರಿ ಚಟುವಟಿಕೆಗಳು ಆರಂಭಗೊಂಡಿವೆ. ಸ್ವಾತಂತ್ರಾನಂತರ, ರಾಷ್ಟ್ರವಿಭಜನೆಯ ಕಹಿ ಮರೆತು ನಿಧಾನವಾಗಿ ಒಂದಾಗತೊಡಗಿದ್ದ ಭಾರತಿಯರ ಮನಸ್ಸುಗಳು ಮತ್ತೆ ಉದ್ವಿಗ್ನಗೊಂಡಿವೆ. ಬರೀ ಮಂದಿರ ನಿರ್ಮಾಣ ವಿವಾದವಾಗಿದ್ದರೆ ಯಾವುದೋ ಒಂದು ರಾಜಿಸೂತ್ರ ಮಾಡಿ ಬಗೆಹರಿಸಬಹುದಾಗಿತ್ತು. ಆದರೆ ಇದರಲ್ಲಿ ಅದಷ್ಟೇ ಅಡಕವಾಗಿಲ್ಲ. ಮಂದಿರ ನಿರ್ಮಾಣದ ನಂತರವೂ ಭಾರತಕ್ಕೆ ನೆಮ್ಮದಿಯ ದಿನಗಳು ಬರುವುದಿಲ್ಲ. ಭಾರತದ ಈಗಿರುವ ಸಂವಿಧಾನವನ್ನು ನಿಷ್ಕ್ರಿಯಗೊಳಿಸಿ, ಅದು ನೀಡಿದ ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನು ನಾಶ ಮಾಡಿ, ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಹಿಂದುತ್ವದ ಹೆಸರಿನಲ್ಲಿ ದೇಶದ ಮೇಲೆ ಹೇರುವುದು ಇವರ ಉದ್ದೇಶವಾಗಿದೆ. ಅದಕ್ಕಾಗಿ ರಾಮಮಂದಿರ ವಿವಾದ ಬಗೆಹರಿದರೂ ಕಾಶಿ ವಿಶ್ವನಾಥ ಹಾಗೂ ಮಥುರಾ ಕೃಷ್ಣಮಂದಿರ ವಿವಾದಗಳನ್ನು ಕೆರಳಿಸಲು ಸಂಘಪರಿವಾರ ಮಸಲತ್ತು ನಡೆಸಿದೆ.

ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಜನಾಗ್ರಹ ಸಭೆಗಳನ್ನು ನಡೆಸಲಾಗುತ್ತಿದೆ. ಈ ಜನಾಗ್ರಹ ಸಭೆಗಳಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿವಾದವನ್ನು ಆದ್ಯತೆ ಯ ಮೇಲೆ ಕೈಗೆತ್ತಿಕೊಳ್ಳದ ಸುಪ್ರೀಂ ಕೋರ್ಟ್ ವಿರುದ್ಧ ನಿತ್ಯವೂ ನಿಂದನೆ ಮಾಡಲಾಗುತ್ತಿದೆ. ಹಿಂದೂಗಳ ಭಾವನೆಗೆ ಸುಪ್ರೀಂ ಕೋರ್ಟ್ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ವಿರುದ್ಧ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ತಮ್ಮ ಸ್ಥಾನದ ಘನತೆಯನ್ನು ಮರೆತು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳ ಮೋದಿ ಆಡಳಿತ ವಿಫಲಗೊಂಡಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿಯಂಥ ದುಡುಕಿನ ಕ್ರಮಗಳಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡ ಹಗಲೇ ಅಮಾಯಕರನ್ನು ದನರಕ್ಷಕರೆಂಬ ಭಯೋತ್ಪಾದಕರು ಕೊಚ್ಚಿ ಕೊಂದು ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಕೊಲ್ಲುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಇವರ ಉದ್ದೇಶವಾಗಿದೆ. ಇದರ ವಿರುದ್ಧ ಒಂದಾಗಿ ಹೋರಾಡಬೇಕಾದ ಜಾತ್ಯತೀತ ಜನಪರ ಶಕ್ತಿಗಳು, ಪಕ್ಷಗಳು ಒಡೆದು ಚೂರು ಚೂರಾಗಿವೆ. ಕೋಮುವಾದಿಗಳ ಈ ಹುನ್ನಾರ ಯಶಸ್ವಿಯಾದರೆ ಭಾರತ ಒಡೆದು ಚೂರು ಚೂರಾಗುತ್ತದೆ. ಅದಕ್ಕೆ ನಾವು ಅವಕಾಶ ನೀಡಬಾರದು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಬಾಬರಿ ಮಸೀದಿ ವಿವಾದ ಇತ್ಯರ್ಥವಾಗಲಿ. ಕಾನೂನಿನಲ್ಲಿ ಸುಗ್ರೀವಾಜ್ಞೆಗೆ ಅವಕಾಶವಿಲ್ಲ. ಭಾರತವನ್ನು ಒಂದಾಗಿ ಉಳಿಸೋಣ. ಮಂದಿರ ನಿರ್ಮಾಣದ ಹೆಸರಿನ ದುರಾಗ್ರಹಕ್ಕೆ ತಕ್ಕ ಉತ್ತರವನ್ನು ಭಾರತೀಯರು ನೀಡಲಿ.

ಅಯೋಧ್ಯೆಯ ವಿವಾದದಿಂದ ರಾಜಕೀಯ ಲಾಭ ಮಾಡಿಕೊಂಡ ಬಿಜೆಪಿ ದೇಶಾದ್ಯಂತ ಇಂಥ ವಿವಾದಗಳನ್ನು ಸೃಷ್ಟಿಸಿ ಅಶಾಂತಿಯ ದಳ್ಳುರಿ ಎಬ್ಬಿಸಲು ಹುನ್ನಾರ ನಡೆಸಿದೆ. ಕರ್ನಾಟಕದ ಬಾಬಾ ಬುಡಾನ್‌ಗಿರಿಯ ನಂತರ ಕೇರಳದಲ್ಲಿ ಶಬರಿ ಮಲೆ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಗಲಭೆಗೆ ಪ್ರಚೋದಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾಗಿ ಗಲಭೆಗೆ ಹೆದರಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಮಂದಿರ -ಮಸೀದಿ ಹೆಸರಿನಲ್ಲಿ ಸದಾ ಅಶಾಂತಿಗೆ ಚಿತಾವಣೆ ಮಾಡುತ್ತಿರುವ ಬಿಜೆಪಿಯ ಮಾನ್ಯತೆಯನ್ನು ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ದೇಶದ ಜನತೆ ಒತ್ತಾಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News