ವಾಜಪೇಯಿಯಂತೆ ಸಹಿಷ್ಣುಗಳಾಗಿ: ಮೋದಿಗೆ ಫಾರೂಕ್ ಅಬ್ದುಲ್ಲಾ ಸಲಹೆ

Update: 2018-12-07 04:24 GMT

ಜಮ್ಮು, ಡಿ.7: ಅಟಲ್ ಬಿಹಾರಿ ವಾಜಪೇಯಿಯವರಂತೆ ಸಹಿಷ್ಣುತೆ ಬೆಳೆಸಿಕೊಳ್ಳಿ; ಆಗ ಮಾತ್ರ ಎಲ್ಲರಿಗೂ ಸ್ವೀಕಾರಾರ್ಹರಾಗುತ್ತೀರಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ಮಾಡಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಬಿಜೆಪಿಯ ವಿಭಜನಕಾರಿ ನೀತಿಯನ್ನು ಕಟುವಾಗಿ ಟೀಕಿಸಿದರು.
"ನೆಹರೂ ಮೊಟ್ಟಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜ ಹಾರಿಸಿದಾಗ, ದೇಶವನ್ನು ಮತ್ತೆ ವಿಭಜಿಸುವ ಪಕ್ಷ ಮುಂದೊಂದು ದಿನ ಅಧಿಕಾರಕ್ಕೆ ಬರಬಹುದು ಎಂದು ಅವರು ಕನಸಿನಲ್ಲೂ ಎಣಿಸಿರಲಿಲ್ಲ. ಆಡಳಿತಾರೂಢ ಪಕ್ಷ ತನ್ನ ವಿಭಜನಕಾರಿ ಕಾರ್ಯಸೂಚಿ ಮುಂದುವರಿಸಿದರೆ ದೇಶ ಹಲವು ಭಾಗಗಳಾಗಿ ಛಿದ್ರವಾಗಲಿದೆ" ಎಂದು ಅವರು ಎಚ್ಚರಿಸಿದರು.

"ರಾಮ ತನಗೆ ಸೇರಿದ್ದು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಪವಿತ್ರ ಗ್ರಂಥಗಳ ಪ್ರಕಾರ ಭಗವಾನ್ ರಾಮ ಇಡೀ ವಿಶ್ವಕ್ಕೆ ಸೇರಿದವರು. ಕೇವಲ ಹಿಂದೂಗಳಿಗಲ್ಲ" ಎಂದು ವಿಶ್ಲೇಷಿಸಿದರು.

ವಾಜಪೇಯಿಯವರಂತೆ ಸಹಿಷ್ಣುತೆ ಬೆಳೆಸಿಕೊಳ್ಳಿ ಎಂದು ಮೋದಿಗೆ ಸಲಹೆ ಮಾಡಿದ ಅವರು, "ಮೋದಿ ಪ್ರಧಾನಿ. ಕ್ಷುಲ್ಲಕ ವಿಷಯಗಳಲ್ಲಿ ತೊಡಗಿಸಿಕೊಳ್ಳದ ಹಂತಕ್ಕೆ ಅವರು ಬೆಳೆಯಬೇಕು. ಅವರ ಹೇಳಿಕೆಗಳ ಬಗ್ಗೆ ನನಗೆ ಅಯ್ಯೋ ಎನಿಸುತ್ತದೆ" ಎಂದು ಚುಚ್ಚಿದರು.

"ಪ್ರಧಾನಿಗಳೇ, ದಯವಿಟ್ಟು ಸಹಿಷ್ಣುತೆ ಬೆಳೆಸಿಕೊಳ್ಳಿ; ಈ ದೇಶವನ್ನು ನೀವು ಆಳಬೇಕಿದ್ದರೆ, ನೀವು ಹೆಚ್ಚು ಸಹಿಷ್ಣುಗಳಾಗಬೇಕು ಹಾಗೂ ಎಲ್ಲರಿಗೂ ಸ್ವೀಕಾರಾರ್ಹವಾಗಬೇಕು. ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕು" ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News