ವಿದೇಶ ವ್ಯಾಸಂಗಕ್ಕೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಧನಸಹಾಯ

Update: 2018-12-07 12:44 GMT

ಬೆಂಗಳೂರು, ಡಿ.7: ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳ ವಿಶ್ವವಿದ್ಯಾನಿಲಯಗಳಿಗೆ ತೆರಳುವ ಆಶಯ ಈಡೇರುವ ದಿನ ಸನ್ನಿಹಿತವಾಗಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಗಳ ವಿಶ್ವವಿದ್ಯಾನಿಲಯಗಳಿಗೆ ತೆರಳುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಭಾರತದಲ್ಲೇ ಪ್ರಪ್ರಥಮವಾಗಿ ‘ಪ್ರಬುದ್ಧ’ ಯೋಜನೆಯನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮೂಲಕ ಜಾರಿಗೊಳಿಸಲಾಗುತ್ತಿದೆ. 

ಪ್ರಬುದ್ಧ ಯೋಜನೆಯಡಿ ವಾರ್ಷಿಕ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದೇಶ ಶಿಕ್ಷಣ ದೊರೆಯುವ ಅವಕಾಶಗಳು ಲಭಿಸಲಿದ್ದು, ಇದಕ್ಕಾಗಿ ಸುಮಾರು 120 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ವಿದೇಶಗಳಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆ ಪಟ್ಟಿ ಮಾಡಿದ್ದು, ಈ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಪ್ರವೇಶ ಬಯಸಬಹುದಾಗಿದೆ. ಅಭ್ಯರ್ಥಿಗಳು ಜಿ.ಆರ್.ಇ, ಜಿ ಮ್ಯಾಟ್, ಸ್ಯಾಟ್ ಮುಂತಾದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ.

‘ಪ್ರಬುದ್ಧ’ ಯೋಜನೆಯಡಿ ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕ, ವಾಸದ ವೆಚ್ಚ ಹಾಗೂ ವಿಮಾನಯಾನ ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ. ಮಹಿಳೆಯರಿಗೆ ಶೇ 33ರಷ್ಟು ಹಾಗೂ ವಿಶೇಷ ಚೇತನರಿಗೆ ಶೇ.3ರಷ್ಟು ಮೀಸಲಾತಿ ಇರುವುದು ಹಾಗೂ ವಿಶೇಷ ಚೇತನರಿಗೆ ಶೇ 4ರಷ್ಟು ಮೀಸಲಾತಿ ಸಿಗಲಿದೆ. ವಾರ್ಷಿಕ 8 ಲಕ್ಷ ರೂ. ವರೆಗೂ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ವಾರ್ಷಿಕ 8ರಿಂದ 15 ಲಕ್ಷ ರೂ. ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ.50ರಷ್ಟು ವೆಚ್ಚ ಹಾಗೂ ವಾರ್ಷಿಕ 15 ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ 33 ರಷ್ಟು ಧನಸಹಾಯವನ್ನು ನೀಡಲಾಗುತ್ತದೆ. 

ಯೋಜನೆಯನ್ನು ಅನುಷ್ಙಾನಕ್ಕೆ ತರುತ್ತಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ''ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದ ಜನರು ವಿದ್ಯಾವಂತರಾಗುವ ಮೂಲಕ ಪ್ರಬುದ್ಧ ಭಾರತವನ್ನು ನಿರ್ಮಿಸುವ ಕನಸನ್ನು ಡಾ.ಬಿ.ಆರ್.ಅಂಬೇಡ್ಕರ್ ಕಂಡಿದ್ದರು. ಡಾ.ಬಿ.ಆರ್.ಅಂಬೆಡ್ಕರ್ ವಿದೇಶದಲ್ಲಿ ವ್ಯಾಸಂಗ ಮಾಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದ್ದ ಆರ್ಥಿಕ ಅಡಚಣೆಯ ಹಿನ್ನೆಲೆಯಲ್ಲಿ ತಮ್ಮ ವ್ಯಾಸಂಗ ಮುಗಿಸಿ ಬಂದ ನಂತರ ರಾಷ್ಟ್ರದ ಸಮೂಹ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪಡೆಯುವಂತಾಗಬೇಕು ಎಂದು ಆಶಿಸಿದ್ದರು. ಬಾಬಾ ಸಾಹೇಬರ ಆಶಯಗಳ ಈಡೇರಿಕೆಗಾಗಿ ಪ್ರಬುದ್ಧ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ'' ಎಂದು ಹೇಳಿದ್ದಾರೆ.

ಈ ಹಿಂದೆ ಸ್ನಾತಕೋತ್ತರ ವ್ಯಾಸಂಗಕ್ಕೆ ಮಾತ್ರ ಇದ್ದ ಆರ್ಥಿಕ ನೆರವಿನ ಚೌಕಟ್ಟನ್ನು ವಿಸ್ತಾರಗೊಳಿಸಿ, ಸ್ನಾತಕಪೂರ್ವ ವ್ಯಾಸಂಗಕ್ಕೂ ವಿದ್ಯಾರ್ಥಿ ವೇತನ ನಿಡುವ ಅವಕಾಶವನ್ನು ಪ್ರಬುದ್ಧ ಯೋಜನೆ ಕಲ್ಪಿಸಿಕೊಡಲಿದೆ. ಎಂಜನಿಯರಿಂಗ್, ಮೂಲ ವಿಜ್ಞಾನ ಹಾಗೂ ಅನ್ವಯಿಕ ವಿಜ್ಞಾನ, ಕೃಷಿ ವಿಜ್ಞಾನ ಹಾಗೂ ವೈದ್ಯಕೀಯ (ಸ್ನಾತಕೋತ್ತರ), ಅಂತರರಾಷ್ಟ್ರೀಯ ವಾಣಿಜ್ಯ, ಅರ್ಥ ಹಾಗೂ ಲೆಕ್ಕಶಾಸ್ತ್ರಗಳು, ಮಾನವಶಾಸ್ತ್ರ, ಸಮಾಜ ವಿಜ್ಞಾನ, ಲಲಿತಕಲೆ ಮತ್ತು ಕಾನೂನು ವಿಷಯಗಳಲ್ಲಿ ವಿದೇಶ ಅಧ್ಯಯನ ಮಾಡುವವರಿಗೆ ಈ ವಿದ್ಯಾರ್ಥಿವೇತನ ಅನ್ವಯವಾಗುವುದು.

''ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನಾಂಗಗಳ ಯುವಕ ಯುವತಿಯರಲ್ಲಿನ ಪ್ರತಿಭೆ ಸಮರ್ಥವಾಗಿ ಅನಾವರಣಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತರುತ್ತಿರುವ ಪ್ರಬುದ್ಧ ಉತ್ತಮ  ಮಾಧ್ಯಮವಾಗಬಲ್ಲದು. ಸ್ನಾತಕಪೂರ್ವ ವಿದ್ಯಾರ್ಥಿಗಳಿಗೂ ವಿದೇಶ ಶಿಕ್ಷಣದ ಅವಕಾಶ ಕಲ್ಪಿಸಿರುವುದು ಹಾಗೂ ವ್ಯಾಸಂಗದ ವೆಚ್ಚವನ್ನು ಸರ್ಕಾರವೇ ಭರಿಸುತ್ತಿರುವುದು ಉನ್ನತ ಶಿಕ್ಷಣಕ್ಕಾಗಿ ಹಂಬಲಿಸುವ ಈ ಜನಾಂಗದ ಯುವಕ ಯುವತಿಯರಲ್ಲಿ ಹೊಸ ಉತ್ಸಾಹ ಮೂಡಿಸಲಿದೆ'' ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ವಿದ್ಯಾರ್ಥಿವೇತನ ಪಡೆಯಲು ರೂಪಿಸಲಾಗಿರುವ ಮಾನದಂಡಗಳ ಅನ್ವಯ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳು ಹಾಗೂ ವಸತಿಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ಹೆಚ್ಚಾಗಿ ಲಭಿಸಲಿದೆ. ವಿದ್ಯಾರ್ಥಿ ಸಮೂಹ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿದೇಶಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಅರ್ಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ www.scholarshipwebsiteaddress.gov.in ಅರ್ಜಿ ಸಲ್ಲಿಸಬೇಕು. ವೆಬ್ ಸೈಟಿನಲ್ಲಿ ಡಿಸೆಂಬರ್ 15ರ ನಂತರ ಅರ್ಜಿ ಲಭ್ಯವಾಗಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News