'ಪ್ರಬುದ್ಧ ಯೋಜನೆ'ಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಚಾಲನೆ

Update: 2018-12-07 12:43 GMT

ಬೆಂಗಳೂರು, ಡಿ. 7: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ಧನಸಹಾಯ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಪ್ರಬುದ್ಧ ಯೋಜನೆ’ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಬುದ್ಧ ಯೋಜನೆ ಉದ್ಘಾಟಿಸಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸುವ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ನಾನು 1980ರಲ್ಲಿ ವಿದ್ಯಾರ್ಥಿ ವೇತನ ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಿದ್ದೆ. ಪ್ರತಿಭಾವಂತ ದಲಿತ ವಿದ್ಯಾರ್ಥಿಗಳು ಆರ್ಥಿಕ ಹಾಗೂ ಪರಿಸರದ ತೊಂದರೆಯಿಂದ ಓದಲು ಸಾಧ್ಯವಾಗಿರುವುದಿಲ್ಲ. ಅಂತಹ ಮಕ್ಕಳಿಗಾಗಿ ಹೊರದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ, ಪ್ರಪಂಚ ಜ್ಞಾನ ವಿಕಾಸವಾಗುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಪದವಿ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಿಕೊಡಲು ಯಾವ ರಾಜ್ಯವೂ ಮುಂದಾಗಿಲ್ಲ. ನಮ್ಮ ಸರಕಾರ ವಿದೇಶಕ್ಕೆ ಕಳುಹಿಸುತ್ತಿರುವುದು ಪ್ರಶಂಸನೀಯ ಎಂದ ಅವರು, ನಮ್ಮಲ್ಲಿ ಶೇ.78ರಷ್ಟು ಸಾಕ್ಷರತಾ ಪ್ರಮಾಣ ಬೆಳೆದಿದೆ. ಆದರೆ, ಎಸ್ಸಿ-ಎಸ್ಟಿ ಸಮುದಾಯದಲ್ಲಿ ಇನ್ನು ಶೇ.40ರ ಆಸು ಪಾಸಿನಲ್ಲಿದೆ. ಇವರನ್ನು ಶೈಕ್ಷಣಿಕವಾಗಿ ಮುಂದೆ ತರುವ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಅಂಬೇಡ್ಕರ್ ಅವರು ವಿದ್ಯಾರ್ಥಿ ವೇತನ ಪಡೆದೇ ವಿದೇಶದಲ್ಲಿ ವ್ಯಾಸಂಗ ಮಾಡಿ, ಉತ್ತಮ ಸಂವಿಧಾನ ನೀಡಿದರು. ಅದೇ ರೀತಿಯಲ್ಲಿ ಮತ್ತೊಬ್ಬರು ಅಂಬೇಡ್ಕರ್ ಹೊರಹೊಮ್ಮಬಹುದು ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು. ಇದೇ ವೇಳೆ ಪ್ರಬುದ್ಧ ಯೋಜನೆ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಲಾಯಿತು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪ್ರಬುದ್ಧ ಯೋಜನೆಯಡಿ ಈ ವರ್ಷ 250 ಪದವಿ ಮತ್ತು 150 ಸ್ನಾತಕೋತ್ತರ ಪದವಿ ಸೇರಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದೇಶ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು, ಇದಕ್ಕಾಗಿ 120 ಕೋಟಿ ರೂ.ವೆಚ್ಚ ಮಾಡಲಾಗುವುದು ಎಂದರು.

ವಿದೇಶಗಳಲ್ಲಿನ ಪ್ರತಿಷ್ಠಿತ ವಿವಿಗಳನ್ನು ಇಲಾಖೆ ಪಟ್ಟಿ ಮಾಡಿದ್ದು, ಈ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಪ್ರವೇಶ ಪಡೆಯಬಹುದು. ಅಭ್ಯರ್ಥಿಗಳು ಜಿಆರ್‌ಇ, ಜಿ ಮ್ಯಾಟ್, ಸ್ಯಾಟ್ ಪರೀಕ್ಷೆ ತೇರ್ಗಡೆ ಹೊಂದುವುದು ಕಡ್ಡಾಯ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕ, ವಾಸದ ವೆಚ್ಚ ಹಾಗೂ ವಿಮಾನಯಾನ ವೆಚ್ಚಗಳನ್ನು ಸರಕಾರದ ಕಡೆಯಿಂದ ಭರಿಸಲಾಗುವುದು. ಮಹಿಳೆಯರಿಗೆ ಶೇ.33ರಷ್ಟು ಹಾಗೂ ವಿಶಿಷ್ಟಚೇತನರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದ ಅವರು, ವಾರ್ಷಿಕ 8ಲಕ್ಷ ರೂ. ಆದಾಯ ಮಿತಿಯ ಕುಟುಂಬಗಳ ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ. ವಾರ್ಷಿಕ 8ರಿಂದ 15ಲಕ್ಷ ರೂ.ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ.50ರಷ್ಟು ವೆಚ್ಚ ಹಾಗೂ ವಾರ್ಷಿಕ 15ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಮಿತಿ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ.33ರಷ್ಟು ಧನಸಹಾಯ ನೀಡಲಾಗುವುದು ಎಂದ ಅವರು ವಿವರಿಸಿದರು.

ಪ್ರತಿಭೆ ಅನಾವರಣಕ್ಕೆ ನೆರವು: ಎಸ್ಸಿ-ಎಸ್ಟಿ ಯುವಕ-ಯುವತಿಯರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಇಲಾಖೆ ಜಾರಿಗೆ ತಂದಿರುವ ‘ಪ್ರಬುದ್ಧ’ ಯೋಜನೆ ಉತ್ತಮ ಮಾಧ್ಯಮ. ಉನ್ನತ ಶಿಕ್ಷಣಕ್ಕಾಗಿ ಹಂಬಲಿಸುವ ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ಆಶಯವನ್ನು ವ್ಯಕ್ತಪಡಿಸಿದರು.

ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ರೂಪಿಸಿರುವ ಮಾನದಂಡಗಳ ಅನ್ವಯ ಇಲಾಖೆಯ ವಿದ್ಯಾರ್ಥಿ ನಿಲಯ-ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ಹೆಚ್ಚಾಗಿ ಲಭಿಸಲಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಅವರು ಸಲಹೆ ನೀಡಿದರು.

‘ಅಂಬೇಡ್ಕರ್ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೊರಟ ಸಂದರ್ಭದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದರಲ್ಲದೆ, ವ್ಯಾಸಂಗ ಮುಗಿಸಿ ಬಂದ ನಂತರ ಪಡೆದ ಸಾಲವನ್ನು ಮರಳಿಸಲು ತೊಂದರೆಪಟ್ಟರು. ಈಗಿನ ಯುವಕರಿಗೆ ಉನ್ನತ ವ್ಯಾಸಂಗಕ್ಕಾಗಿ ಯಾವುದೇ ತೊಂದರೆಗಳು ಎದುರಾಗಬಾರದೆಂಬ ಕಾರಣಕ್ಕೆ ಪ್ರಬುದ್ಧ ಯೋಜನೆ ಜಾರಿಗೆ ತರಲಾಗಿದೆ’

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

ಡಿ.15ರಿಂದ ಅರ್ಜಿ ಸಲ್ಲಿಕೆ ಆರಂಭ

ವಿದೇಶಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಅರ್ಹ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಆನ್‌ಲೈನ್  www.scholarshipwebsite address.gov.in ಮೂಲ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟಿನಲ್ಲಿ ಡಿ.15ರ ನಂತರ ಅರ್ಜಿ ಲಭ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News