ಇಂಟರ್ ನೆಟ್ ನಲ್ಲಿ ಸೆನ್ಸೇಶನ್ ಸೃಷ್ಟಿಸಿದೆ ಭಾರತದ ಹಾಡುವ ಕತ್ತೆ

Update: 2018-12-07 09:51 GMT

ಪುಣೆ, ಡಿ.7: ಕತ್ತೆಗಳ ಕಿರುಚಾಟ ಕಿವಿಗೆ ಕರ್ಕಶವಾಗುವುದು ಸಹಜ, ಆದರೆ ಇಲ್ಲೊಂದು ಹೆಣ್ಣು ಕತ್ತೆ ತನಗೆ ಖುಷಿಯಾದಾಗಲೆಲ್ಲಾ ಎಷ್ಟು ಚೆನ್ನಾದ ರಾಗ ನುಡಿಸುತ್ತದೆಯೆಂದರೆ ಅದು ಈಗಾಗಲೇ 'ಸಿಂಗಿಂಗ್ ಡಾಂಕಿ' ಎಂಬ ಹೆಸರಿನೊಂದಿಗೆ ಇಂಟರ್ನೆಟ್ ಸೆನ್ಸೇಶನ್ ಆಗಿ ಬಿಟ್ಟಿದೆ.

ಈ ಗಾಯಕಿ ಕತ್ತೆಗೆ 'ಎಮಿಲಿ' ಎಂಬ ಹೆಸರನ್ನಿಡಲಾಗಿದೆ, ಕೆಲ ಸಮಯದ ಹಿಂದೆ ಪುಣೆಯ ರಸ್ತೆಗಳಲ್ಲಿ ಮರಿ ಹಾಕಿ ಗಂಭೀರ ಸ್ಥಿತಿಯಲ್ಲಿದ್ದ ಈ ಕತ್ತೆ ಎನ್‌ಜಿಒ ರೆಸ್ಕ್ಯೂ ಚ್ಯಾರಿಟೇಬಲ್ ಟ್ರಸ್ಟ್ ಸದಸ್ಯರ ಕಣ್ಣಿಗೆ ಬಿದ್ದಿತ್ತು. ಆ ವೇಳೆ ನಿಲ್ಲುವ ಸ್ಥಿತಿಯಲ್ಲೂ ಅದು ಇರಲಿಲ್ಲ. ಅದರ ಮರಿ ಅದಾಗಲೇ ಸತ್ತಿತ್ತು. ಈ ಕತ್ತೆಯನ್ನು ಸಂಸ್ಥೆಯ ಕಚೇರಿಗೆ ತಂದು ಅಲ್ಲಿ ಚಿಕಿತ್ಸೆ ಆರಂಭಿಸಿದಾಗ ಮೊದಮೊದಲು ಆಕ್ರಮಣಕಾರಿಯಾಗಿದ್ದ ಎಮಿಲಿ ತನ್ನ ಸುತ್ತ ಇರುವವರನ್ನು ಕಂಡರೆ ಸಿಟ್ಟಾಗುತ್ತಿತ್ತು ಸಂಸ್ಥೆಯ ಟೀನಾ ಮೋಹನದಾಸ್ ಹೇಳುತ್ತಾರೆ.

ಸತತ ಚಿಕಿತ್ಸೆಯಿಂದ ಎಮಿಲಿ ಗುಣಮುಖಳಾದ ನಂತರ ಈಗ ಎಲ್ಲರ ಮೇಲೂ ಅಪರಿಮಿತ ಪ್ರೀತಿ ಹೊಂದಿದೆ ಹಾಗೂ ಖುಷಿಯಾದಾಗಲೆಲ್ಲಾ ಅದರ ದನಿ ಹಾಡು ಹೇಳಿದಂತಿರುತ್ತದೆ ಎಂದು ಟೀನಾ ಹೇಳುತ್ತಾರೆ.

‘‘ಎಮಿಲಿಗೆ ತಿನ್ನುವುದೆಂದರೆ ಇಷ್ಟ. ಅದರ ಇಷ್ಟದ ತಿನಿಸು ನೀಡಿದಾಗ ಧನ್ಯವಾದ, ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಿರುವಂತೆ ಭಾಸವಾಗುವ ರೀತಿಯಲ್ಲಿ ರಾಗವೆತ್ತುತ್ತದೆ’’ ಎಂದು ರೆಸ್ಕ್ಯೂ ಸಂಸ್ಥೆಯ ಮುಖ್ಯಸ್ಥೆ ನೇಹಾ ಪಂಚಮಿಯ ಹೇಳುತ್ತಾರೆ.

ಪ್ರತಿಯೊಂದು ಪ್ರಾಣಿಯೂ ತನ್ನ ಭಾವನೆಗಳನ್ನು ತನ್ನದೇ ರೀತಿಯಲ್ಲಿ ವ್ಯಕ್ತಪಡಿಸುತ್ತದೆ, ಕುದುರೆಗಳಿಗೆ ಖುಷಿಯಾದರೆ ವೇಗವಾಗಿ ಓಡಿ ಕಾಲುಗಳನ್ನು ಮೇಲಕ್ಕೆತ್ತುತ್ತವೆ, ನಾಯಿಗಳು ಗಿರಕಿ ಹೊಡೆದು ಖುಷಿ ಪಡುತ್ತವೆ, ಈ ಕತ್ತೆ ಕೂಡ ಖುಷಿಯಿಂದ ದನಿಯೆತ್ತಿದಾಗ ಹಾಡು ಹಾಡಿದಂತೆ ಕೇಳಿಸುತ್ತದೆ’’ ಎಂದು ಪಶುವೈದ್ಯ ಡಾ.ಜೆಯಾ ಭರತ್ ಹೇಳಿದ್ದಾರೆ.

ಇತ್ತೀಚೆಗೆ ಐಯರ್ಲ್ಯಾಂಡಿನ ಕತ್ತೆ ಹ್ಯಾರಿಯಟ್ ಹಾಡುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News